ಕಾರವಾರ: ಸಿದ್ದಿ ಬುಡಕಟ್ಟು ಸಮುದಾಯದವರಿಗೆ ವಿಶೇಷವಾಗಿ ನೀಡುವ ಪೌಷ್ಟಿಕ ಆಹಾರವನ್ನು ರಾಜ್ಯ ಸರಕಾರ ಪೂರೈಕೆ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆಟ್ ಸಿದ್ದಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ವರ್ಷದ ಆರು ತಿಂಗಳು ಸರಕಾರ ಕಾಡಿನಲ್ಲಿ ವಾಸಿಸುವ ಸಿದ್ದಿ ಬುಡಕಟ್ಟು ಸಮುದಾಯದವರಿಗೆ ಪೌಷ್ಟಿಕ ಆಹಾರದ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಪಡಿತರದ ಮೂಲಕ ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿತ್ತು. ಈ ಸಾಲಿನಲ್ಲಿ ನೀಡುವುದನ್ನು ಬಂದ್ ಮಾಡಲಾಗಿದೆ. ಯಾವ ಕಾರಣಕ್ಕೆ ನೀಡುತ್ತಿಲ್ಲ ಎಂದು ತಿಳಿದಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಬಳಿ ಹೋರಾಟ ನಡೆಸಲಾಗುವುದು ಎಂದರು. ಪೌಷ್ಟಿಕ ಆಹಾರ ಆರು ತಿಂಗಳಿಂದ ಬಂದಿಲ್ಲ. ಮಳೆ ಇಲ್ಲದೆ ಬೆಳೆ ಬಂದಿಲ್ಲ. ಕೂಲಿ ಇಲ್ಲ. ಉಪವಾಸ ಬೀಳುವಂತಾಗಿದ್ದು, ಕೂಡಲೇ ವಿತರಣೆ ಮಾಡಬೇಕು. ಇಲ್ಲವಾದಲ್ಲಿ ಡಿಸೆಂಬರ್ ನಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಉಪಾಧ್ಯಕ್ಷ ಜಾನ್ ಕೋಸ್ಟಾ ಸಿದ್ದಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ಆರು ತಿಂಗಳು ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. 8- 10 ವರ್ಷಗಳಿಂದ ನಡೀತಿತ್ತು. ಜೂನ್ ತಿಂಗಳಿನಿಂದ ಡಿಸೆಂಬರ್ ವರೆಗೆ ಕೊಡುತ್ತಿದ್ದರು. ಈ ಸಾಲಿನಲ್ಲಿ ಜೂನ್ ನಲ್ಲಿ ಸಿಗುವಂಥದ್ದು ಇನ್ನೂ ಸಿಕ್ಕಿಲ್ಲ. ಮೊದಲು 15 ಕೆಜಿ ಅಕ್ಕಿ, 90 ಮೊಟ್ಟೆ ಇತ್ತು.. ಅಕ್ಕಿ 8 ಕೆಜಿಗೆ ಇಳಿಸಿದ್ದಾರೆ. ಮೊಟ್ಟೆ 30ಕ್ಕೆ ಬಂದಿದೆ. ಸಕ್ಕರೆ ಒಂದು ಕೆಜಿ, ಒಂದು ಕೆಜಿ ಬೆಲ್ಲ, ಎರಡು ಕೆಜಿ ಅಡುಗೆ ಎಣ್ಣೆ, ಅರ್ಧ ಕೆಜಿ ತುಪ್ಪ, ಬೇಳೆಕಾಳುಗಳು ಸಿಗುತ್ತಿತ್ತು. ಈಗ ಅವೆಲ್ಲವನ್ನು ಬಂದ್ ಮಾಡಲಾಗಿದೆ. ಇಲಾಖೆ ಕೇಳಿದರೆ ಟೆಂಡರ್ ಆಗಿಲ್ಲ, ಬಜೆಟ್ ಇಲ್ಲ ಎಂಬ ಕಾರಣಗಳನ್ನ ನೀಡುತ್ತಿದ್ದಾರೆ. ಸಚಿವ ವೈದ್ಯರು ಇದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಪದಾಧಿಕಾರಿಗಳು ಇದ್ದರು.