ಹೊನ್ನಾವರ: ತಾಲೂಕಿನ ಮುಗ್ವಾ ಚರ್ಚ್ ಕ್ರಾಸ್‌ನಿಂದ ಕಣ್ಣಿಮನೆ ಬ್ರಿಜ್‌ಗೆ ಹೋಗುವ ರಸ್ತೆಗೆ ಕಳಪೆ ಕಾಮಗಾರಿ ನಡೆಸಿ ಕಾಂಕ್ರೆಟೀಕರಣ ಮಾಡಲಾಗುತ್ತಿದ್ದು, ಈ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳಿಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುಮಟಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ರಸ್ತೆಗೆ ಶಾಸಕರ ನಿಧಿಯಿಂದ 300 ಮಿಟರ್ ಕಾಂಕ್ರೆಟ್ ರಸ್ತೆಗೆ 25 ಲಕ್ಷ ರೂ. ಮಂಜುರಾಗಿತ್ತು. ರಸ್ತೆ ನಿರ್ಮಾಣ ಕೆಲಸವು ನಡೆದಿದ್ದು, ಕಾಮಗಾರಿಯನ್ನು ಮಂಜೂರಾದ ಉದ್ದಕ್ಕಿಂತ ಕಡಿಮೆ ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ. ಅಲ್ಲದೇ ರಸ್ತೆಗೆ ಅತ್ಯಂತ ತೆಳುವಾಗಿ ಕಾಮಕ್ರೀಟ್ ಹಾಕಲಾಗಿದ್ದು, ವೈಬ್ರೇಟರ್‌ಅನ್ನು ಎಲ್ಲ ಕಡೆಗಳಲ್ಲಿ ಅಳವಡಿಸಿಲ್ಲ. ಈಗಲೇ ಜೆಲ್ಲಿ ಮತ್ತು ಸಿಮೆಂಟ್ ಎದ್ದು ಹೋಗುತ್ತಿದೆ. ರಸ್ತೆಯ ಮಧ್ಯೆ ಹೊಂಡದ ರೀತಿ ತೆಳುವಾಗಿ ಕಾಂಕ್ರೀಟ್ ಹಾಕಲಾಗಿದೆ. ರಸ್ತೆಯ ಬದಿಯಲ್ಲಿ ಸ್ವಲ್ಪ ದಪ್ಪ ಕಾಂಕ್ರೇಟ್ ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಗಿದೆ. ಇನ್ನು ಒಂದು ವರ್ಷ ಮುಗಿಯುವುದರೊಳಗೆ ಸಂಪೂರ್ಣ ರಸ್ತೆ ಹಾಳಾಗುವ ರೀತಿಯಲ್ಲಿ ಅತ್ಯಂತ ಕಳಪೆಯಾಗಿ ಈ ರಸ್ತೆ ಕಾಮಗಾರಿಯನ್ನು ಮಾಡಲಾಗಿದೆ. ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಂಡು ಉತ್ತಮ ರಸ್ತೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸ್ಥಳಿಯರಾದ ಗಣೇಶ ಗೌಡ, ಚೇತನಾ ಗೌಡ, ಯಮುನಾ ಗೌಡ, ವಿಕ್ಟರ್ ಲೋಪಿಸ್, ರೋಬಿನ್ ಫರ್ನಾಂಡಿಸ್, ನ್ಯಾನ್ಸಿ ಫರ್ನಾಂಡಿಸ್ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.