ಜೊಯಿಡಾ: ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ 112ನೇ ವರ್ಷದ ವಾರ್ಷಿಕೋತ್ಸವದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಗಣ್ಯಮಾನ್ಯರಿಂದ ಅದ್ಧೂರಿ ಚಾಲನೆ ದೊರೆಯಿತು.
ಶ್ರೀಚೆನ್ನಬಸವಣ್ಣ ದೇವಸ್ಥಾನದಿಂದ ಶಾಲೆಯವರೆಗೆ ಮೆರವಣಿಗೆ ಕೋಲಾಟ, ಡೋಲು ವಾದ್ಯಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಡಿವಾಳ ಮಹಾಸ್ವಾಮಿಗಳು ರಾಜಯೋಗೇಂದ್ರ ರಾಜಗುರು ಸ್ವಾಮಿಗಳು ಮಾತನಾಡಿ, ಇದು ಅಪರೂಪದ ಕಾರ್ಯಕ್ರಮ. ಹಿಂದೂ ಮುಸ್ಲಿಂ ಎಲ್ಲಾ ಧರ್ಮದವರು ಸೇರಿ ಶಾಲಾ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಭಾವಕ್ಯತೆಯನ್ನು ಎತ್ತಿ ತೋರಿಸುತ್ತದೆ, ಭಾರತ ಎಲ್ಲಿದೆ ಎಂದರೆ ಉಳವಿಯಲ್ಲಿದೆ ಎನ್ನಬಹುದು. ಅಷ್ಟೊಂದು ಅನ್ಯೋನ್ಯವಾಗಿ ಇಲ್ಲಿಯ ಜನರು ಇದ್ದಾರೆ. ಇದೆಲ್ಲವೂ ಶ್ರೀಚೆನ್ನಬಸವಣ್ಣನ ಆಶೀರ್ವಾದ. ಆದ್ದರಿಂದಲೇ ಕನ್ನಡ ಮತ್ತು ಉರ್ದು ಶಾಲೆಗಳು ಇಷ್ಟೊಂದು ಉತ್ತಮವಾಗಿ ನಡೆಯುತ್ತಿವೆ ಎಂದರು.
ಮರಳು ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಗುರುವಿನ ಆಶಿರ್ವಾದ ಇದಲ್ಲದೆ ಯಾವ ಕೆಲಸವು ಸಾಧ್ಯವಿಲ್ಲ. ತಮ್ಮ ಗುರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ. ಶಾಲಾ ಕಾರ್ಯಕ್ರಮ ಎಂದು ತಿಳಿಯದೇ ಊರಿನ ಕಾರ್ಯಕ್ರಮ ಎಂದು ತಿಳಿದು ಹಬ್ಬದ ರೀತಿ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.
ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೋಕಾಶಿ, ಜಿ.ಪಂ. ಮಾಜಿ ಸದಸ್ಯ ರಮೇಶ್ ನಾಯ್ಕ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಂದಿಗದ್ದಾ ಗ್ರಾ.ಪಂ. ಅಧ್ಯಕ್ಷ ಅರುಣ ದೇಸಾಯಿ, ಕುಂಬಾರವಾಡಾ ಉಪಾಧ್ಯಕ್ಷ ದತ್ತಾ ನಾಯ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಂಗೇಶ ಕಾಮತ್, ಜೊಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮ್ಮದ್ ಶೇಖ್, ಉಳವಿ ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರ ಜುಬೇರ ಶೇಖ್, ಜಾಯಿದ ಶೇಖ್, ಚನ್ನಬಸವಾನಂದ ಮಹಾಸ್ವಾಮಿ, ದೇವಸ್ಥಾನದ ಪ್ರಧಾನ ಅರ್ಚಕ ಕಲ್ಮಠ ಶಾಸ್ತ್ರಿ, ಜನಾಬ ಅಬ್ದುಲ್ ಕರಿಂ ಮೌಲಾಸಾಬ ಮುಲ್ಲಾ, ರಫೀಖ್ ಖಾಜಿ ಸೇರಿದಂತೆ ಬಹಳಷ್ಟು ಗಣ್ಯರು ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ಉರ್ದು ಶಾಲೆ ಮತ್ತು ಕನ್ನಡ ಶಾಲೆಗಳ ಸಹಯೋಗದಲ್ಲಿ ಸುವರ್ಣ ಮಹೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ನಡೆದಿದ್ದು ಶ್ಲಾಘನೀಯವಾಗಿದೆ. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.