ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನಿನಲ್ಲಿ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗಾಗಿ ವೈದಿಕ ಗಣಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಳಗಾವಿಯ ಸುಪ್ರಸಿದ್ಧ ಬರಹಗಾರರು ಮತ್ತು ಪ್ರಕಾಶಕರು, ಕವಿಗಳು, ಇಂಗ್ಲೀಷ್ ಭಾಷೆಯ ಸಂವಹನದ ಬಗ್ಗೆ ಅನೇಕ ಕೃತಿಗಳನ್ನು ರಚಿಸಿರುವ ಮತ್ತು ಇಂಗ್ಲೀಷ್ ಭಾಷೆಯ ಸಂವಹನದ ಬಗ್ಗೆ ಮತ್ತು ವೈದಿಕ ಗಣಿತದ ಬಗ್ಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ಕುಶ್ ಎಂ. ದುರ್ಗಿಯವರು ವೈದಿಕ ಗಣಿತದ ಬಗ್ಗೆ ತರಬೇತಿ ನೀಡಿದರು. ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚಿನ ಗಮನ ನೀಡಬೇಕು. ಗಣಿತ ಕಬ್ಬಿಣದ ಕಡಲೆಯಲ್ಲ, ಸರಳ ಸೂತ್ರಗಳನ್ನು ತಿಳಿಯುವ ಮೂಲಕ ಗಣಿತದಲ್ಲಿ ಉತ್ತಮ ಸಾಧನೆ ಮಾಡಬಹುದು, ವಿಜ್ಞಾನ, ತಂತ್ರಜ್ಞಾನ ಇಲ್ಲದ ಕಾಲದಲ್ಲಿಯೇ ಗಣಿತ ಸೂತ್ರಗಳ ಮೂಲಕ ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಕಾಲ, ಋತುಗಳ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ತಿಳಿಸುತ್ತಿದ್ದರು ಎಂದು ಪ್ರಾತ್ಯಕ್ಷಿಕವಾಗಿ ಸರಳವಾಗಿ ವೈದಿಕ ಗಣಿತ ತರಬೇತಿಯನ್ನು ನೀಡಿದರು. ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಆಡಳಿತಾಧಿಕಾರಿ ಜಿ. ಮಂಜುನಾಥರವರು ವಿದ್ಯಾರ್ಥಿಗಳಿಗೆ ಗಣಿತದ ಬಗ್ಗೆ ಇರುವ ಭಯದ ಮನೋಭಾವ ಹೋಗಬೇಕು. ಗಣಿತ ಎಂಬುದು ಜೀವನದ ಉದ್ದಕ್ಕೂ ಅಗತ್ಯವಾದ ವಿಷಯವಾಗಿದ್ದು, ಗಣಿತವನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಮ್ ಗೋನೆಹಳ್ಳಿಯವರು, ಹಿರಿಯ ಶಿಕ್ಷಕರಾದ ಶ್ರೀ ಎಂ. ಜಿ. ಹಿರೇಕುಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ದಿವ್ಯಜ್ಯೋತಿ ಪ್ರಾರ್ಥಿಸಿದರು. ಶಿಕ್ಷಕಿ ಪೂರ್ಣಿಮಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ಸ್ವಾತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಿವೇದಿತಾ ಸಾವಂತ್ ವಂದಿಸಿದರು.