ಹೊನ್ನಾವರ: ಪಟ್ಟಣ ಪಂಚಾಯತಿಯಲ್ಲಿ ಕಳೆದ ಎಂಟು ತಿಂಗಳಿನಿಂದ ಜನಪ್ರತಿನಿಧಿಗಳಿದ್ದರೂ ಸಾಮನ್ಯ ಸಭೆಯಾಗಲಿ, ಸ್ಥಾಯಿ ಸಮಿತಿ ಸಭೆಯಾಗಲಿ ನಡೆಯದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ವಾರ್ಡ್ ಸದಸ್ಯರಿಗೆ ತಮ್ಮ ವಾರ್ಡಿನಲ್ಲಿ ಹಲವು ಸಮಸ್ಯೆಗಳಿದ್ದರೂ ಬಗೆಹರಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
ಕಳೆದ ಮಾರ್ಚ್ನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಗಿದಿದೆ. ಐದು ವರ್ಷಗಳ ಕಾಲ ಜನರಿಂದ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಸದಸ್ಯರ ಅವಧಿ ಮುಗಿದಿಲ್ಲ. ಈ ಸದಸ್ಯರೆಲ್ಲರೂ ಸೇರಿ ಆಯ್ಕೆ ಮಾಡಿದ ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿಯೂ ಮುಗಿದಿಲ್ಲ. ಅದರೂ ಪ.ಪಂ.ಯಲ್ಲಿ ಜನಪ್ರತಿನಿಧಿಗಳ ಸಭೆ ನಡೆಯದೇ ಇರುದನ್ನು ನೋಡಿದರೆ ಇಲ್ಲಿ ಕಾಣದ ಕೈಗಳ ಕೈಚಳಕ ಕಾಣುತ್ತಿದೆ. ಸಾಮನ್ಯ ಸಭೆ ನಡೆಸಲು ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಅವಧಿ ಮುಗಿದಿದೆ ಎಂದು ಸಬೂಬು ಹೇಳುತ್ತಾ ಬಂದಿದ್ದಾರೆ. ಆದರೆ ಸ್ಥಾಯಿಸಮಿತಿ ಅಧ್ಯಕ್ಷರ ಮುಂದಾಳತ್ವದಲ್ಲಿ ಸ್ಥಾಯಿ ಸಮಿತಿ ಸಭೆ ನಡೆಸಿಯಾದರೂ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದಲ್ಲದೆ ಹೋದರೆ ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆಯಾದರೂ ಮಾಡಬಹುದಿತ್ತು. ಇದು ಯಾವುದೇ ಮಾಡದೇ ಅಧಿಕಾರಿಗಳೇ ಆಡಳಿತ ನಡೆಸುವ ಮೂಲಕ ಖರ್ಚು ವೆಚ್ಚದ ಮಾಹಿತಿ ಸಮರ್ಪಕವಾಗಿ ನೀಡದೇ ದುಂದುವೆಚ್ಚ ನಡೆಯುತ್ತಿದೆ ಎನ್ನುವುದು ಕೆಲ ಸದಸ್ಯರ ಆರೋಪವಾಗಿದೆ.
ಚರಂಡಿ, ಬೀದಿದೀಪ, ರಸ್ತೆ, ಕುಡಿಯುವ ನೀರು, ಪ.ಪಂ. ಜನತೆಗೆ ಆಗುವ ಕೆಲಸದಲ್ಲಿ ವಿಳಂಬದ ಕುರಿತು ಚರ್ಚೆ ಮಾಡಿ ಸರಿದಾರಿಗೆ ತರುವತ್ತ ಸದಸ್ಯರು ಸಭೆಯಲ್ಲಿ ಚರ್ಚಿಸಿ ತಿರ್ಮಾನವಾಗುತ್ತಿತ್ತು. ಕಛೇರಿಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಅಧಿಕಾರಿಗಳ ನಿಯೋಜನೆ ಮಾಡುವ ಕಾರ್ಯವಾಗುತ್ತಿತ್ತು. ಆದರೆ ಎಂಟು ತಿಂಗಳಿನಿಂದ ಸಭೆ ನಡೆಯದೇ ಇರುದರಿಂದ ಈ ಎಲ್ಲಾ ಸಮಸ್ಯೆಯಿಂದ ಜನತೆಗೆ ಸಕಾಲಕ್ಕೆ ಕೆಲಸವಾಗುತ್ತಿಲ್ಲ.
ಪಟ್ಟಣವು ಪುರಸಭೆ ಆಗಿ ಮಾರ್ಪಟ್ಟಲು ಸೂಕ್ತ ದಾಖಲಾತಿ ಒದಗಿಸಬೇಕಿತ್ತು. ಪುರಸಭೆಯಾದರೆ ಅನುದಾನದ ಜೊತೆಗೆ ಹೆಚ್ಚಿನ ಸಿಬ್ಬಂದಿಯಿಂದ ಇನ್ನಷ್ಟು ಅಭಿವೃದ್ದಿಯಾಗುತ್ತಿತ್ತು. ನೆರೆಯ ಕುಮಟಾದಿಂದ ಪ್ರತಿನಿತ್ಯ ಕಸ ಹೊನ್ನಾವರದ ವಿಲೇವಾರಿ ಘಟಕಕ್ಕೆ ಬರತ್ತದೆ. ಹಿಂದೊಮ್ಮೆ ಸದಸ್ಯರ ವಿರೋಧದಿಂದ ಸ್ಥಗಿತವಾಗಿತ್ತು. ಹೀಗೆ ಸಾಲು ಸಾಲು ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ವಿರೋಧಿಸಲು ಹಾಗೂ ವಾರ್ಡ ಸಮಸ್ಯೆ ಬಗೆಹರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೆರೆಯ ಕುಮಟಾ ಹಾಗೂ ಭಟ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಪ.ಪಂ. ಅಧ್ಯಕ್ಷ ಉಪಾಧ್ಯಕ್ಷ ಅವಧಿಯು ಮುಗಿದಿದ್ದು ಅಲ್ಲಿ ಚುನಾಹಿತ ಪ್ರತಿನಿಧಿಗಳ ಸಭೆ ನಡೆಸಿ ಕುಂದುಕೊರತೆ ನಿವಾರಣೆಯಾಗುತ್ತದೆ. ಆದರೆ ಈ ಎರಡು ತಾಲೂಕಿನ ಮಧ್ಯೆ ಇರುವ ಹೊನ್ನಾವರ ತಾಲೂಕಿನಲ್ಲಿ ಮಾತ್ರ ಸಭೆ ನಡೆಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳಿಯ ಶಾಸಕರು ಸಚೀವರು ಗಮನಹರಿಸಿ ಜನಪ್ರತಿನಿಧಿಗಳ ಸಭೆ ನಡೆಸಿ ಪಟ್ಟಣದ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕಿದೆ.
ವಾರ್ಡಿನಲ್ಲಿ ಹಲವು ಸಮಸ್ಯೆ ಇದ್ದು, ಯಾವುದನ್ನು ಬಗೆಹರಿಸಲು ಆಗುತ್ತಿಲ್ಲ. ಈ ಹಿಂದೆ ಸಭೆಯಲ್ಲಿ ಅಧಿಕಾರಿಗಳಿಗೆ ಈ ಬಗ್ಗೆ ಛಾಟಿ ಬೀಸಿಯಾದರೂ ಕೆಲಸ ಅಗುತ್ತಿತ್ತು. ಈಗ ಅಧಿಕಾರಿಗಳ ಬಳಿ ಕಾಡಿ ಬೇಡಿ ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ಆಡಿದ್ದೆ ಆಟವಾಗಿದೆ.
– ಹೆಸರು ಹೇಳಲು ಇಚ್ಛಿಸದ ಪ.ಪಂ.ಸದಸ್ಯ
ಕಳೆದ ಹಲವು ವರ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಾಮಕಾವಸ್ಥೆಗೆ ಸೀಮೀತವಾಗಿದ್ದಾರೆ. ವಾರ್ಡಿನಲ್ಲಿ ಬೆಟ್ಟದಷ್ಟು ಸಮಸ್ಯೆ ಇದ್ದರೂ ಯಾವುದು ಬಗೆಹರಿಯುತ್ತಿಲ್ಲ. ಕೆಲ ಸದಸ್ಯರ ಮಾತು ಮಾತ್ರ ಆಫಿಸನಲ್ಲಿ ನಡೆಯುತ್ತದೆ. ಇನ್ನು ಪ್ರಭಾವಶಾಲಿಗಳ ಕೆಲಸ ಮಾತ್ರ ಆಗಲಿದೆ. ಹೊರಗೂಲಿ ನೌಕರರು ಕೆಲಸ ಮಾಡುತ್ತಾರೆ. ಇರುವ ಬೆರಳೆಣಿಕಯಷ್ಟು ಖಾಯಂ ಸಿಬ್ಬಂದಿಗಳು ಯಾರ ಮಾತು ಕೆಳುತ್ತಿಲ್ಲ. ಸಭೆ ನಡೆಯುತ್ತಿದ್ದರೆ ವಾರ್ಡ ಸದಸ್ಯರಿಗೆ ಹೇಳಿಯಾದರೂ ಕೆಲಸ ಮಾಡಿಸಿಕೊಳ್ಳಬಹುದಿತ್ತು.
– ಸಂತೋಷ, ಪ.ಪಂ. ನಿವಾಸಿ