ಶಿರಸಿ: ತಾಲೂಕಿನ ಹಲಸಿನಕೈ ಅಣ್ಣಪ್ಪ ನಾಯಕರ ಮನೆಯ ಕಾಳಿಕಾಂಬಾ ದೇವಸ್ಥಾನದಲ್ಲಿ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯಿಂದ ಅತಿಥಿ ಕಲಾವಿದರೊಂದಿಗೆ ಕರ್ಣಪರ್ವ ತಾಳಮದ್ದಲೆ ಸಂಪನ್ನಗೊಂಡಿತು. ಕಳೆದ 20 ವರ್ಷಗಳಿಂದ ಅಣ್ಣಪ್ಪ ನಾಯಕರ ಕುಟುಂಬದವರು ವಿಜೃಂಭಣೆಯಿಂದ ನವರಾತ್ರಿ ಆಚರಿಸಿ ವಿಜಯದಶಮಿಯ ದಿನ ಯಕ್ಷಗಾನ ತಾಳಮದ್ದಲೆ ಸೇವೆ ನಡೆಸಿಕೊಂಡು ಬಂದಿರುವುದು ಕಲಾರಾಧನೆ ಮತ್ತು ಕಲೋನ್ನತಿಗೆ ಕೊಡುಗೆಯಾಗಿದೆ.
ತಿಮ್ಮಣ್ಣ ಭಾಗವತ ಗಾಣಗದ್ದೆ, ತಿಮ್ಮಪ್ಪ ಗೌಡ ಇಳೇಹಳ್ಳಿ, ವಿಠ್ಠಲ ಪೂಜಾರಿ ಮಂಚಿಕೇರಿ, ಹಿಮ್ಮೇಳ ವೈಭವ ನೀಡಿದರು. ಯಕ್ಷಗಾನ ವಿದ್ವಾಂಸ, ಅರ್ಥದಾರಿ, ಡಾ. ಜಿ.ಎ. ಹೆಗಡೆ, ಸೋಂದಾ, ಕೃಷ್ಣನಾಗಿ, ‘ಕೃಷ್ಣಸ್ತು ಸ್ವಯಂ ಭಗವಾನ್’ ಎಂಬುದನ್ನು ತಾತ್ವಿಕವಾಗಿ ನಿರೂಪಿಸುತ್ತಾ. ಚತುರ ಕೃಷ್ಣನಾಗಿ ರಘುಪತಿ ನಾಯ್ಕರ ಶಲ್ಯನ ಮುಂದೆ ಸಾರಥ್ಯಕ್ಕೆ ಸಂಬಂಧಿಸಿ ಹಲವು ಪ್ರಶ್ನೆಗಳನ್ನು ಇಟ್ಟು ಶಲ್ಯನ ಸೇನಾಧಿಪತ್ಯವನ್ನು ಅಣಕಿಸಿ ತಮಗೆ ಬೇಕಾದ ಉತ್ತರವನ್ನು ಶಲ್ಯನಿಂದ ಪಡೆಯುತ್ತಾ ಕೃಷ್ಣ ಶಲ್ಯರ ಸಂಭಾಷಣೆಗೆ ಮೌಲ್ಯ ತಂದು ಉತ್ತಮವಾಗಿ ವ್ಯಾಖ್ಯಾನಿಸಿದರು. ಎಂ.ವಿ. ಹೆಗಡೆ ಅಮಚಿ ಅರ್ಜುನನಾಗಿ, ಆರ್.ಟಿ. ಭಟ್ಟ ಕರ್ಣನಾಗಿ ಸೆಣಸಾಡಿದರು. ಕರ್ಣ ಶಲ್ಯರ ವಾಗ್ವಾದದಲ್ಲಿ ಕೃಷ್ಣ ಅರ್ಜುನರ ಸಹಜ ಸಂಭಾಷಣೆಗಳು ಕರ್ಣನ ಪಾತ್ರ ಚಿತ್ರಣ ರಸಕಾವ್ಯವಾಗಿ ಪ್ರಸಂಗಕ್ಕೆ ಕಳೆ ತಂದು ಕರ್ಣಾವಸಾನ ಯಶಸ್ವಿಯಾಯಿತು.
ಮುಖ್ಯ ಅತಿಥಿ ಶಿಕ್ಷಕ ರಮೇಶ ಹೆಗಡೆ ಕೆರೆಕೋಣ, ಸನಾತನ ಧರ್ಮದಲ್ಲಿ ದೇವಿಯ ಆರಾಧನೆಯ ಮಹತ್ವ ಕುರಿತಾಗಿ ತಿಳಿಸಿ ತಾಳಮದ್ದಲೆಯ ಮಹತ್ವ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಅಣ್ಣಪ್ಪ ನಾಯ್ಕರು ಹೃದಯಂಗಮವಾಗಿ ಮೂಡಿ ಬಂದ ತಾಳಮದ್ದಲೆ ಪ್ರೇಕ್ಷಕರಿಗೆ ಮುದ ನೀಡಿ ಧನ್ಯತೆಯ ಭಾವ ಸೃಷ್ಠಿಸಿತು ಎಂದರು. ಮಂಡಳಿಯ ಯಜಮಾನ ರಘು ನಾಯ್ಕರು ಆಭಾರ ಮನ್ನಿಸಿದರೆ ಕುಟುಂಬದ ಸದಸ್ಯರು ಕಲಾವಿಧರನ್ನು ಗೌರವಿಸಿ ಆತಿಥ್ಯ ನೀಡಿದರು.