ಕಾರವಾರ: ಕೊಂಕಣ ರೈಲ್ವೆ ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಹೆಚ್ಚುವರಿ ಭೂ ಪರಿಹಾರ ಕಲ್ಪಿಸುವ ಸಂಬಂಧ ದಾಖಲಾದ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ಅಂಕೋಲಾ ತಾಲ್ಲೂಕಿನ ಹಾರವಾಡ, ಅವರ್ಸಾ ಭಾಗದ ನಿರಾಶ್ರಿತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕಳೆದ 30 ವರ್ಷಗಳ ಹಿಂದೆ ಕೃಷಿ ಭೂಮಿಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡ ಅಂಕೋಲಾ ತಾಲ್ಲೂಕಿನ ಹಾರವಾಡ, ಅವರ್ಸಾ ಭಾಗದ ಹಾಲಕ್ಕಿ ಹಾಗೂ ಇತರೆ ಸಮಾಜದ ರೈತರು ರೈಲ್ವೆ ಯೋಜನೆಗೆ ಭೂಮಿಯನ್ನು ನೀಡಿದ್ದರು. ಆದರೆ ಭೂಸ್ವಾಧೀನವಾದಾಗ ಪ್ರತಿ ಗುಂಟೆಗೆ 400ರಿಂದ 1 ಸಾವಿರ ರೂ.ಗಳನ್ನು ಮಾತ್ರ ಭೂಸ್ವಾಧೀನಾಧಿಕಾರಿಗಳು ನೀಡಿದ್ದರು. ಆದರೆ ಇದರ ವಿರುದ್ಧ ಕೆಲವರು ಭೂಸ್ವಾಧೀನ ಕಾಯ್ದೆ 18ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕಾರಣ ಹೆಚ್ಚುವರಿ ಪರಿಹಾರವನ್ನು ಪಡೆದುಕೊಂಡಿದ್ದರು.
ಆದರೆ ಅನಕ್ಷರಸ್ಥರಾದ ಕೆಲವರು ಕಾನೂನಿನ ಅರಿವಿಲ್ಲದೇ ಇನ್ನೊಂದು ಅವಕಾಶವಾದ 28 (ಎ)ರನ್ವಯ ಪ್ರಕರಣಗಳನ್ನು 2006ರಲ್ಲಿ ದಾಖಲಿಸಿದ್ದರು. ಪ್ರಕರಣ ಸಂಬಂಧ ಕೊಂಕಣ ರೈಲ್ವೇ ಕುಮಟಾದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದಲ್ಲಿ ಈ ಹಿಂದೆ ವಿಚಾರಣೆ ನಡೆಸಲಾಗಿದೆ. ಅಲ್ಲದೆ ಪ್ರಕರಣದ ಅಡಿ ಅರ್ಜಿದಾರರಿಂದ ಎಲ್ಲಾ ಪ್ರಮಾಣಪತ್ರ ಪಡೆಯಲಾಗಿದೆ. ಆದರೆ ರೈಲ್ವೆ ಯೋಜನೆಗೆ ನಿರಾಶ್ರಿತರಾಗಿ ಮನೆ- ಮಠ ಕಳೆದುಕೊಂಡಿದ್ದು ಈವರೆಗೂ ಯಾವುದೇ ವಿಚಾರಣೆ ನೋಟೀಸ್ ಕೂಡ ಜಾರಿ ಮಾಡಿಲ್ಲ. ಭೂಸ್ವಾಧೀನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ನ್ಯಾಯ ಸಿಕ್ಕಿಲ್ಲ. ಅಧಿಕಾರಿಗಳು ಈ ಬಗೆಗಿನ ನಿರ್ಲಕ್ಷ್ಯ ಹಾಗೂ ಪದೇ ಪದೇ ಭೂಸ್ವಾಧೀನಾಧಿಕಾರಿಗಳು ಬದಲಾವಣೆ ಆಗುತ್ತಿರುವುದರಿಂದ ನಿರಾಶ್ರಿತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ನಿರಾಶ್ರಿತರು ಬಹುತೇಕ ಮಂದಿ ಆರ್ಥಿಕವಾಗಿ ಬಡವರು, ಅನಾರೋಗ್ಯವಂತರೂ, ವಿಧವೆಯರು, ವೃದ್ಧರಾಗಿದ್ದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಗಮನ ಹರಿಸಿ 28 (ಎ) ಪ್ರಕರಣಗಳನ್ನು ಶೀಘ್ರದಲ್ಲಿ ವಿಚಾರಣೆ ಕೈಗೆತ್ತಿಕೊಂಡು ಪ್ರಕರಣ ಇತ್ಯರ್ಥ ಮಾಡುವುದರ ಜೊತೆಗೆ ಪರಿಹಾರ ನೀಡಿದ್ದಲ್ಲಿ ಜೀವನ ನಡೆಸಲು ಅನುಕೂಲಕರವಾಗಲಿದೆ. ಒಂದೊಮ್ಮೆ ಇದೇ ರಿತಿ ನಿರ್ಲಕ್ಷ್ಯ ತಾಳಿದ್ದಲ್ಲಿ ಉಗ್ರ ಹೋರಾಟ ಕೂಡ ಮಾಡುವುದಾಗಿಯೂ ಮನವಿಯಲ್ಲಿ ಎಚ್ಚರಿಸಿದ್ದಾರೆ.