ಶಿರಸಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆʼ ಅಭಿಯಾನದ ಅಂಗವಾಗಿ ತಾಲೂಕಿನ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಿಯಲ್ಲಿ ಗುರುವಾರ ಪ್ರಸಕ್ತ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಹಾಗೂ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಹಾಗೂ ಅಹವಾಲುಗಳನ್ನು ಪಡೆದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಸಭೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡಿ, ಸಾರ್ವಜನಿಕ ಹಿತಕ್ಕಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸದಾ ಸಿದ್ಧವಾಗಿದ್ದು, ಅದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ತಾಲೂಕು ಪಂಚಾಯತಿ ಸಹಾಯ ನಿರ್ದೇಶಕ ಬಿ.ವೈ. ರಾಮಮೂರ್ತಿ ಮಾತನಾಡಿ, ನರೇಗಾ ಯೋಜನೆಯಡಿ ಹಲವಾರು ಯೋಜನೆಗಳು ಲಭ್ಯವಿದ್ದು, ಅರ್ಹರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ಶಿರಸಿ ತಾಲೂಕು ಬರಗಾಲ ಪೀಡಿತ ತಾಲೂಕಾಗಿ ಘೋಷಿತವಾಗಿರುವುದರಿಂದ ರೈತರು ಹೆಚ್ಚಾಗಿ ಜಾಬ್‌ಕಾರ್ಡ್ಗಳನ್ನು ಮಾಡಿಸಿಕೊಂಡು, ನರೇಗಾ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರು.
ಕೃಷಿ ಇಲಾಖೆಯ ಅಧಿಕಾರಿ ಮಧುಕರ್ ನಾಯ್ಕ, ಬಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ರಾಮಗೌಡ, ಪಂಚಾಯಿತಿಯ ಸರ್ವ ಸದಸ್ಯರು, ಪಿಡಿಓ ಪ್ರದೀಪ ಅಂಕೋಲೆಕರ್, ತಾಲೂಕ ಐಇಸಿ ಸಂಯೋಜಕ ವಿಶ್ವಾಸ ಅಂಗಡಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.