Slide
Slide
Slide
previous arrow
next arrow

ವಹೀದಾ ರೆಹಮಾನ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

300x250 AD

ಹೊಸದಿಲ್ಲಿ: ಬಾಲಿವುಡ್‌ನ ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ 2021ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ.

85ರ ಹರೆಯದ ವಹೀದಾ ರೆಹಮಾನ್ ಅವರು ಗೈಡ್, ಪ್ಯಾಸಾ, ಕಾಗಜ್ ಕೆ ಫೂಲ್ ಮತ್ತು ಚೌಧವೀಂ ಕಾ ಚಾಂದ್‌ನಂತಹ ಸೂಪರ್‌ಹಿಟ್‌ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ ಚಲನಚಿತ್ರಗಳಲ್ಲಿ ನಟಿಸಿದ್ದು, ಬಾಲಿವುಡ್‌ ರಸಿಕರ ಮೆಚ್ಚುಗೆಯ ನಟಿಯಾಗಿದ್ದಾರೆ. ಅವರು ಪದ್ಮಭೂಷಣ ಮತ್ತು ಪದ್ಮಶ್ರೀ ಪುರಸ್ಕಾರಗಳನ್ನೂ ಪಡೆದಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ; ಇದನ್ನು ಕೇಂದ್ರ ಸರ್ಕಾರ ಕೊಡಮಾಡುತ್ತದೆ.

ಎಕ್ಸ್‌ (ಟ್ವಿಟರ್)‌ನಲ್ಲಿನ ಪೋಸ್ಟ್‌ನಲ್ಲಿ, ಅನುರಾಗ್ ಠಾಕೂರ್ ಹೀಗೆ ಬರೆದಿದ್ದಾರೆ: “ವಹೀದಾ ರೆಹಮಾನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ವರ್ಷದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ನಾನು ಅಪಾರ ಸಂತೋಷ ಪಡುತ್ತೇನೆ. ವಹೀದಾಜೀ ಹಿಂದಿ ಚಲನಚಿತ್ರಗಳಲ್ಲಿನ ಅವರ ಪಾತ್ರಗಳಿಗಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆದಿದ್ದಾರೆ. ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬಿವಿ ಔರ್ ಗುಲಾಮ್, ಗೈಡ್, ಖಾಮೋಶಿ ಅವುಗಳಲ್ಲಿ ಪ್ರಮುಖವಾದವುಗಳು. 5 ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು ತಮ್ಮ ಪಾತ್ರಗಳನ್ನು ಮೆರೆದಿದ್ದಾರೆ. ರೇಷ್ಮಾ ಔರ್ ಶೇರಾ ಚಿತ್ರದ ಪಾತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಹೀದಾಜಿ ಅವರು ಸಮರ್ಪಣೆ, ಬದ್ಧತೆ ಮತ್ತು ಅತ್ಯುನ್ನತ ಮಟ್ಟವನ್ನು ಸಾಧಿಸಬಲ್ಲ ಭಾರತೀಯ ನಾರಿಯ ಶಕ್ತಿಯನ್ನು ಪ್ರತಿನಿಧಿಸಿದ್ದಾರೆ. ಕಠಿಣ ಪರಿಶ್ರಮದಿಂದ ವೃತ್ತಿಪರ ಶ್ರೇಷ್ಠತೆ ಸಾಧಿಸಿದ್ದಾರೆ. ಸಂಸತ್ತು ಐತಿಹಾಸಿಕ ನಾರಿ ಶಕ್ತಿ ವಂದನೆ ಅಧಿನಿಯಮವನ್ನು ಅಂಗೀಕರಿಸಿರುವ ಸಮಯದಲ್ಲಿ ವಹೀದಾ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿರುವುದು ಸಕಾಲಿಕ ಹಾಗೂ ಭಾರತೀಯ ಚಿತ್ರರಂಗದ ಪ್ರಾತಿನಿಧಿಕ ಪ್ರಮುಖ ಮಹಿಳೆಯೊಬ್ಬರಿಗೆ ನೀಡಿದ ಸೂಕ್ತವಾದ ಗೌರವ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ನಮ್ಮ ಚಲನಚಿತ್ರ ಇತಿಹಾಸದ ಭಾಗವಾಗಿರುವ ಅವರ ಸಾಧನೆಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.”

300x250 AD

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯು ದಿವಂಗತ ನಟ ದೇವ್ಆನಂದ್ ಅವರ ಶತಮಾನೋತ್ಸವದೊಂದಿಗೆ ಸೇರಿಕೊಂಡಿದೆ. ದೇವ್ ಆನಂದ್ ಹಾಗೂ ವಹೀದಾ ರೆಹಮಾನ್ 1965ರ ಬ್ಲಾಕ್‌ಬಸ್ಟರ್‌ ಚಿತ್ರ ʼಗೈಡ್‌ʼನ ರೊಮ್ಯಾಂಟಿಕ್‌ ಜೋಡಿ. ಈ ವರ್ಷದ ಕೊನೆಯಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ವಹೀದಾ ರೆಹಮಾನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 2020ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಆಶಾ ಪರೇಖ್ ಹಾಗೂ ಅದರ ಹಿಂದಿನ ವರ್ಷದ (2019) ಪ್ರಶಸ್ತಿಯನ್ನು ರಜನಿಕಾಂತ್‌ ಪಡೆದಿದ್ದರು. ವಹೀದಾ ಸದ್ಯ ಬೆಂಗಳೂರಿನ ನಿವಾಸಿಯಾಗಿದ್ದಾರೆ.

Share This
300x250 AD
300x250 AD
300x250 AD
Back to top