ಶಿರಸಿ: ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಇದು ಕೇವಲ ಮಾಧ್ಯಮದವರ ಸೃಷ್ಟಿ ಎಂದು ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ ನೀಡಿದ್ದಾರೆ.
ತಾಲೂಕಿನ ಬನವಾಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರುವುದಾಗಿ ಎಲ್ಲೂ ಹೇಳಿಲ್ಲ. ನಾನು ಬಿಜೆಪಿಯಲ್ಲಿದ್ದೇನೆ. ಮಾಧ್ಯಮದವರು ಇದೆಲ್ಲವನ್ನೂ ಸೃಷ್ಟಿ ಮಾಡುತ್ತಿದ್ದಾರೆ. ಸಚಿವ ಮಂಕಾಳು ವೈದ್ಯ ಕಾಂಗ್ರೆಸ್ ಬಾಗಿಲು ತೆರೆದಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಸಚಿವ ಮಂಕಾಳು ವೈದ್ಯರಿಗೆ ಅಭಿನಂದನೆಗಳು ಎಂದರು. ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಕೇವಲ ಮಾತಿನಲ್ಲಿ ಮೈತ್ರಿ ವಿಚಾರ ಪ್ರಸ್ತಾಪವಾಗಿದೆ. ಈ ಕುರಿತು ಎರಡು ಪಕ್ಷಗಳು ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿಲ್ಲ. ಅಧಿಕೃತ ಘೋಷಣೆಯಾದ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಹಿಂದೆ ಮನಮೋಹನ ಸಿಂಗ್, ಹೆಚ್.ಡಿ.ದೇವೇಗೌಡರು ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ ಸ್ಪಷ್ಟ ಬಹುಮತ ಸಿಗದೆ ಅದು ಜಾರಿಗೆ ಬಂದಿರಲಿಲ್ಲ. ಬಹಳ ವರ್ಷಗಳಿಂದ ಆಗಬೇಕಾಗಿದ್ದ ಮಹಿಳಾ ಮೀಸಲಾತಿ ಪ್ರಕ್ರಿಯೆ ಇದೀಗ ಜಾರಿಗೆ ಬಂದಿದೆ. ಲೋಕಸಭೆಯಲ್ಲಿ ಎಲ್ಲಾ ಪಕ್ಷಗಳು ಮಹಿಳಾ ಮೀಸಲಾತಿಗೆ ಸಾಥ್ ನೀಡಿದ್ದಾರೆ. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಜಿ.ಪಂ, ತಾ.ಪಂಗೆ ಮೀಸಲಾತಿ ಜಾರಿಯಾಗಿತ್ತು. ಇದೀಗ ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಿದೆ. ಶೇ.50ಕ್ಕೂ ಹೆಚ್ಚು ಮತದಾರರಿರುವ ಮಹಿಳಾ ಸಮುದಾಯಕ್ಕೆ ಇದರ ಉಪಯೋಗವಾಗಬೇಕು ಎಂದು ಹೇಳಿದರು.