ಕಾರವಾರ: ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಸತೀಶ್ ಸೈಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಬೆಂಗಳೂರು ಶೇಷಾದ್ರಿಪುರಂನ ಶ್ರೀನಿವಾಸ ಎಂಬುವವರು ಮೂರು ಪುಟಗಳ ಲಿಖಿತ ದೂರನ್ನು ಬೆಂಗಳೂರಿನ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ. ಸೈಲ್ ಅವರು ತಮ್ಮ ಹಾಗೂ ಪತ್ನಿ ಕಲ್ಪನಾ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ ಕುರಿತಂತೆ ಅಫಿಡವಿಟ್ನಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಕಂಪನಿಯ ಬ್ಯಾಂಕ್ ವಹಿವಾಟನ್ನು ಅಫಿಡವಿಟ್ನಲ್ಲಿ ನಮೂದಿಸಿಲ್ಲ. ಆಕ್ಸಿಸ್ ಬ್ಯಾಂಕ್ ಮುಂಬೈನ ವರ್ಲಿಯ ಶಾಖೆಯಲ್ಲಿ 63,90,19,813 ರೂ. ಮೊತ್ತದ ಅಡಮಾನ ಸಾಲ ಪಡೆದಿರುವ ಕುರಿತು ಕೂಡ ಮಾಹಿತಿ ನೀಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಲಾಜಿಸ್ಟಿಕ್ಸ್ ಮತ್ತು ಎಕ್ಸ್ಪೋರ್ಟ್ ಮತ್ತು ಶ್ರೀಮಲ್ಲಿಕಾರ್ಜುನ ವಾಟರ್ ವೇಯ್ಸ್ ಇವರ ಒಡೆತನದಲ್ಲಿ ಜಮೀನು ಪಡೆದಿರುವ ಕುರಿತು ಅಫಿಡವಿಟ್ನಲ್ಲಿ ಮಾಹಿತಿ ನೀಡಿಲ್ಲ. ನಿಗದಿತ ಉದ್ದೇಶಕ್ಕಾಗಿ 30 ವರ್ಷದ ಅವಧಿಗೆ ಬಂದರು ಇಲಾಖೆಯಿಂದ ಪಡೆದಿರುವ ಜೆಟ್ಟಿಗಳನ್ನು ಸೈಲ್ ಅವರು ಕಾನೂನು ವಿರುದ್ಧವಾಗಿ ಬ್ಯಾಂಕಿನಲ್ಲಿ ಅಡಮಾನ ಇಟ್ಟಿದ್ದಾರೆ. ಚುನಾವಣೆ ವೇಳೆ ಅವರು ಉಳಿತಾಯ ಖಾತೆ ಕುರಿತು ಮಾತ್ರ ಮಾಹಿತಿ ನೀಡಿದ್ದಾರೆ. ಆದರೆ ಹೊರ ರಾಜ್ಯದ ಬ್ಯಾಂಕ್ ಆಗಿರುವ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಸುಮಾರು 7,282.24 ಲಕ್ಷ ರೂ. ಸಾಲವಿದೆ. ಈ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರುದಾರ ಶ್ರೀನಿವಾಸ್ ಆಗ್ರಹಿಸಿದ್ದಾರೆ.