ಶಿರಸಿ: ಕಾರವಾರದಲ್ಲಿ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ತಿವ್ರವಾಗಿ ಖಂಡಿಸಿರುವ ಡಾ.ಅಂಬೇಡ್ಕರ್ ಪ್ರಗತಿಪರ ದಲಿತ ವೇದಿಕೆಯು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಉಪವಿಭಾಗಾಧಿಕಾರಿ ಮೂಲಕ ಮನವಿ ರವಾನಿಸಲಾಗಿದೆ.
ಇತ್ತೀಚಿಗೆ ಕಾರವಾರದ ನಗರಸಭೆಯ ಪೌರ ಕಾರ್ಮಿಕರಾದ ಚೇತನಕುಮಾರ್ ವಿ. ಕೊರಾರ ಮತ್ತು ಪುರುಷೋತ್ತಮ ವಿ. ಕೊರಾರ ರವರು ಸಂಜೆ ವೇಳೆಗೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕೊಡಿಬೇರ ದೇವಸ್ಥಾನ ರಸ್ತೆಯ ಸ್ಥಳೀಯ ನಿವಾಸಿಯಾದ ನಿತೀನ್ ಹರಿಕಾಂತ್ರರವರು ರಸ್ತೆ ಪಕ್ಕ ಕಸ ಚೆಲ್ಲುವ ಸಂದಭದಲ್ಲಿ ದಯವಿಟ್ಟು ರಸ್ತೆ ಪಕ್ಕ ಕಸ ಚೆಲ್ಲಬೇಡಿ ಕಸದ ಗಾಡಿಗೆ ಕಸವನ್ನು ನೀಡಿ ಎಂದು ಹೇಳಿದಕ್ಕೆ ಕೋಪಗೊಂಡ ನಿತೀನ ಹರಿಕಾಂತ ಇವರು ಪೌರಕಾರ್ಮಿಕರ ಮೇಲೆ ಕೋಪಗೊಂಡು ಅವಾಚ್ಯವಾಗಿ ನಿಂದಿಸಿ ತನ್ನ ಸಹೋದರನಾದ ನಿತೀಶ ಹರಿಕಾಂತ್ರ ಇವರನ್ನು ಕರೆದು ದೊಣ್ಣೆಗಳಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಹಲ್ಲೆಗೊಳಗಾದವರು ತಮ್ಮ ಸಹದ್ಯೋಗಿಗಳೊಂದಿಗೆ ನಗರಸಭೆ ಆಯುಕ್ತರ ಜೊತೆ ಪೊಲೀಸ್ ಸ್ಟೇಶನ್ನಲ್ಲಿ ದೂರು ನೀಡಿರುತ್ತಾರೆ. ಹಲ್ಲೆಗೊಳಗಾದವರು ಪರಿಶಿಷ್ಟ ಜಾತಿಯವರಾಗಿದ್ದು ಕಾರವಾರ ಪುರಸಭೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರುತ್ತಾರೆ. ಈ ಘಟನೆಯಿಂದ ಅವರು ಬಹಳ ಅವಮಾನಿತರಾಗಿ ಮಾನಸಿಕವಾಗಿ ಭಯಭೀತರಾಗಿದ್ದಾರೆ. ಆದ್ದರಿಂದ ನಗರಸಭೆಯಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ನೀಡಬೇಕೆಂದು ಮತ್ತು ಹಲ್ಲೆ ನಡೆಸಿದವರ ಮೇಲೆ ಪರಿಶಿಷ್ಟ ಜಾತಿ ಪಂಗಡದ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಕೊರಾರ ಸಮಾಜದವರು ಮತ್ತು ಪೌರಕಾರ್ಮಿಕರ ಪರವಾಗಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಗತಿ ಪರ ದಲಿತ ವೇದಿಕೆಯ ಖಜಾಂಚಿಯಾದ ಶ್ರೀ ಗಣಪತಿ ಮುರ್ಡೇಶ್ವರ, ಸುಭಾಷ ಮುಂಡೂರ, ರಾಜೇಶ ಆಯ್ತರಾ ಹಾಗೂ ಹಲವಾರು ಪೌರಕಾರ್ಮಿಕರು ಉಪಸ್ಥಿತರಿದ್ದರು.