ಶಿರಸಿ: ಗ್ರಾಮೀಣ ಪ್ರದೇಶದ ಸಣ್ಣ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿಯೂ ಸ್ಪರ್ಧಾ ಮನೋಭಾವ ಮನೆ ಮಾಡಿತ್ತು. ಒಬ್ಬರಿಗಿಂತ ಒಬ್ಬರು ಸ್ಪರ್ಧೆಯಲ್ಲಿ ತಾವು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ತಾಲೂಕಿನ ಮತ್ತಿಗಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಸಂಪಖಂಡ ಕ್ಲಸ್ಟರ್ ಮಟ್ಟದ ಶಾಲೆಗಳ ಪ್ರತಿಭಾ ಕಾರಂಜಿ ಸನ್ನಿವೇಶ ಇದು. ಸ್ಥಬ್ಧ ಚಿತ್ರ, ಕಂಠಪಾಠ, ಹಾಡುಗಾರಿಕೆ, ಭಾಷಣ, ಧಾರ್ಮಿಕ ಪಠಣ ಸೇರಿದಂತೆ 27 ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆ ತೋರಿಸಿದ್ದರು.
ಪ್ರತಿಭಾಕಾರಂಜಿಗೆ ಚಾಲನೆ ನೀಡಿದ ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಲ್ವೆಸ್ಟರ್ ರೆಬೆಲ್ಲೊ ಮಾತನಾಡಿ, ಮಕ್ಕಳ ಪ್ರತಿಭೆ ಹೊರ ತರಲು ಪ್ರತಿಭಾ ಕಾರಂಜಿ ಮೊದಲ ವೇದಿಕೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸದಸ್ಯ ಚಂದ್ರಕಾಂತ ಹೆಗಡೆ, ಪ್ರತಿಭಾ ಕಾರಂಜಿಗೆ ಸರ್ಕಾರದ ಸೂಕ್ತ ಸಹಾಯಧನ ಲಭಿಸುತ್ತಿಲ್ಲ. ಮಕ್ಕಳ ಪ್ರತಿಭೆಗೆ ಒರೆ ಹಚ್ಚುವ ಕಾರ್ಯಕ್ರಮಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು ಎಂದರು.
ಮತ್ತಿಗಾರ ಶಾಲೆಯ ಅಧ್ಯಕ್ಷೆ ಶೋಭಾ ಲ. ಭಟ್, ಶಿಕ್ಷಣ ಇಲಾಖೆಯ ದಿನೇಶ ಶೇಟ್, ಪ್ರಸನ್ನ ಹೆಗಡೆ, ನಾಗವೇಣಿ ಆಚಾರಿ, ರಾಘವೇಂದ್ರ ಆಚಾರಿ, ಪತ್ರಕರ್ತ ಮಂಜುನಾಥ ಸಾಯೀಮನೆ, ವಿನಯ ಹೆಗಡೆ ನೇರ್ಲದ್ದ, ರಾಘವೇಂದ್ರ ಹೆಗಡೆ ಪಟ್ಟಿಗುಂಡಿ ಇತರರಿದ್ದರು. ಶಿಕ್ಷಕಿ ಶಾರದಾ ಮಂಗಳೂರು, ಸಂಧ್ಯಾ ಇದ್ದರು. ಮತ್ತಿಗಾರ ಮತ್ತು ನೇರ್ಲವಳ್ಳಿ ಶಾಲೆಯ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.