ಶಿರಸಿ :ರಾಜ್ಯದ ಪ್ರತಿಷ್ಠಿತ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ ಬ್ಯಾಂಕ್ ) 2022-23 ನೇ ಸಾಲಿನಲ್ಲಿ 15.56 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಎನ್.ಪಿ.ಎ. ಪ್ರಮಾಣ ಶೆ.1.62 ಕ್ಕೆ ಇಳಿಕೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.
ನಗರದ ಕೆಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಂಕ್ 103 ವರ್ಷ ಪೂರೈಸಿ 104 ನೇ ವರ್ಷಕ್ಕೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಎನ್.ಪಿ.ಎ. ಪ್ರಮಾಣ ತೀವ್ರವಾಗಿ ಕಡಿಮೆಯಾಗಿದ್ದು, ಲಾಭ ಗಳಿಕೆ ಹೆಚ್ಚಾಗಿದೆ ಎಂದರು.
ಬ್ಯಾಂಕಿನ ಶೇರು ಬಂಡವಾಳ 94.48 ಕೋಟಿ ರೂಪಾಯಿಗಳಿಂದ 110.39 ಕೋಟಿಗೆ , ನಿಧಿಗಳು 187.65 ಕೋಟಿಗಳಿಂದ 247.31 ಕೋಟಿಗೆ ಹಾಗೂ ಠೇವುಗಳು 2957.45 ಕೋಟಿಗಳಿಂದ 3057.08 ಕೋಟಿಗೆ ಏರಿಕೆಯಾಗಿದೆ. ಒಟ್ಟೂ 299.35 ಕೋಟಿ ಆದಾಯ ಆಗಿದ್ದು 2805.58 ಕೋಟಿ ಸಾಲಬಾಕಿ ಇದೆ. ದುಡಿಯುವ ಬಂಡವಾಳ 4098.58 ಕೋಟಿ ತಲುಪಿದೆ. ಕೆಡಿಸಿಸಿ ಬ್ಯಾಂಕ್ ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ರೈತರಿಗೆ ಎಲ್ಲಾ ವಿಧದ ಕೃಷಿ ಸಾಲ ಪೂರೈಸುತ್ತಲಿದ್ದು, ಕಳೆದ 17 ವರ್ಷಗಳಿಂದ ನಬಾರ್ಡ್ ಮಾರ್ಗಸೂಚಿಯನ್ವಯ ಕೃಷಿ ಭೂಮಿ ಖರೀದಿ ಬಗ್ಗೆ ವ್ಯವಸಾಯ ಸಾಲದಡಿಯಲ್ಲಿ ಮಾಧ್ಯಮಿಕ ಸಾಲ ನೀಡಲಾಗುತ್ತಿದೆ ಎಂದರು.
ಬ್ಯಾಂಕಿನ 53ಶಾಖೆಗಳು ಗಣಕೀಕರಣಗೊಂಡಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಗ್ರಾಹಕರಿಗೆ ತ್ವರಿತವಾಗಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದ ಅವರು, ರಾಜ್ಯ ಸರ್ಕಾರವು 2016ನೇ ಸಾಲಿನಿಂದ ಈ ಹಿಂದೆ ಇದ್ದ ಬೆಳೆವಿಮೆ ಪದ್ದತಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ( ವಿಮಾ)ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ವ್ಯಾಪ್ತಿಗೆ ಜಿಲ್ಲೆಯ 61260 ರೈತರ 72170 ಏಕರೆ 35 ಗುಂಟೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಗೆ 79643 ರೈತರ 46806 ಏಕರೆ 26 ಗುಂಟೆ ಕ್ಷೇತ್ರ ಒಳಪಟ್ಟಿದೆ. ಅದೇ ರೀತಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಬಂಧಿಸಿದಂತೆ 6.71 ಕೋಟಿ ವಿಮಾ ರಕಂ ಈ ವರೆಗೆ ನೇರವಾಗಿ ರೈತರ ಆಧಾರ್ ಲಿಂಕ್ ಹೊಂದಿದ ಉಳಿತಾಯ ಖಾತೆಗಳಿಗೆ ಜಮಾ ಆಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನದಾಸ ನಾಯಕ್, ನಿರ್ದೇಶಕರುಗಳಾದ ಜಿ.ಆರ್. ಹೆಗಡೆ ಸೋಂದಾ ,ಆರ್. ಎಂ. ಹೆಗಡೆ ಬಾಳೇಸರ, ರಾಘವೇಂದ್ರ ಶಾಸ್ತ್ರಿ, ಎಲ್. ಟಿ. ಪಾಟೀಲ್, ಕೃಷ್ಣ ದೇಸಾಯಿ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ರಾಮಕೃಷ್ಣ ಹೆಗಡೆ ಕಡವೆ, ಗಜಾನನ ಪೈ, ತಿಮ್ಮಯ್ಯ ಹೆಗಡೆ, ಶಿವಾನಂದ ಹೆಗಡೆ ಕಡತೋಕ ಸೇರಿ ಹಲವರು ಉಪಸ್ಥಿತರಿದ್ದರು.