ಸಿದ್ದಾಪುರ: ಸಹಕಾರಿ ಸಂಘಗಳು ಬೆಳೆದರೆ ಸುತ್ತಮುತ್ತಲಿನ ರೈತರಿಗೆ, ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುವುದಲ್ಲದೇ ಸದಸ್ಯರ ಆರ್ಥಿಕ ಸಮಸ್ಯೆಗೆ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವುದು ಸಹಕಾರಿ ಸಂಘಗಳು ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ತಾಲೂಕಿನ ವಂದಾನೆಯಲ್ಲಿ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನೂತನ ಗೋದಾಮನ್ನು ಉದ್ಘಾಟಿಸಿ ಮಾತನಾಡಿ, ದೊಡ್ಮನೆ ಸೇವಾ ಸಹಕಾರಿ ಸಂಘ ಅಭಿವೃದ್ಧಿ ಹೊಂದುತ್ತ ಬಂದಿರುವುದು ಶ್ಲಾಘನೀಯವಾಗಿದೆ. ಸರ್ಕಾರ ಯಾವತ್ತೂ ಸಹಾಯ ಸಹಕಾರ ನೀಡುತ್ತದೆ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ 5ಗ್ಯಾರಂಟಿ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ.ಎಲ್ಲ ಸಮುದಾಯದ ಎಲ್ಲ ಜನರಿಗೂ ಯೋಜನೆಗಳನ್ನು ತಲುಪಿಸುವ ಕಾರ್ಯ ನಮ್ಮದು. ನಾವು ರಾಜಕಾರಣ ಮಾಡುತ್ತಿಲ್ಲ. ಜನರಿಗೆ 10ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ಆಶ್ವಾಸನೆ ಕೊಟ್ಟಂತೆ ಕೊಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಶಾಸಕರು, ಪಕ್ಷದ ಮುಖಂಡರು ಪಕ್ಷದ ಘೋಷಣೆಯನ್ನು ಮನೆ ಮನೆಗೆ ಹೋಗಿ ತಿಳಿಸಿದ್ದಾರೆ.ಸಾಮಾನ್ಯ ಜನರಿಗೂ ಸರ್ಕಾರದ ಯೋಜನೆ ಸಿಗಬೇಕು ಎನ್ನುವುದು ನಮ್ಮದಾಗಿದೆ ಎಂದು ಹೇಳಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಸಂಘಗಳು ಜನರ ನಾಡಿಮಿಡಿತವಾಗಿದೆ. ಮಾನವೀಯತೆಯ ಮೇಲೆ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜನತೆಗೆ ಬಹಳ ಹತ್ತಿರವಾಗಿದೆ. ಇದು ನಿರಂತರವಾಗಿರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಹೆಚ್ಚು ಅವಕಾಶ ನೀಡಬೇಕೆಂದರು.
ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸದಸ್ಯರು ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ತಮ್ಮ ಮಹಸೂಲನ್ನು ಟಿಎಸ್‌ಎಸ್ ಮೂಲಕ ವ್ಯಾಪಾರ ಮಾಡಿ ಟಿಎಸ್‌ಎಸ್‌ನ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ಸಂಘದ ಅಧ್ಯಕ್ಷ ಸುಬ್ರಾಯ ಎನ್.ಭಟ್ಟ ಗಡಿಹಿತ್ಲ, ಉಪಾಧ್ಯಕ್ಷ ಚೌಡು ಗೌಡ, ಕ್ಯಾದಗಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ನಾಯ್ಕ, ದೊಡ್ಮನೆ ಗ್ರಾ.ಪಂ ಅಧ್ಯಕ್ಷೆ ಶಾರದಾ ಹೆಗಡೆ, ಸಂಘದ ನಿರ್ದೇಶಕರುಗಳು, ತಹಸೀಲ್ದಾರ ಎಂ.ಆರ್.ಕುಲಕರ್ಣಿ ಇತರರಿದ್ದರು. ವಿವೇಕ ಭಟ್ಟ ಗಡಿಹಿತ್ಲ, ದಿವಾಕರ ಭಟ್ಟ, ರಾಮಕೃಷ್ಣ ಭಟ್ಟ, ಅಪರ್ಣಾ ಶಾಸ್ತಿç ಕಾರ್ಯಕ್ರಮ ನಿರ್ವಹಿಸಿದರು.