ಶಿರಸಿ: ಗೋಕುಲಾಷ್ಟಮಿ ಅಂಗವಾಗಿ ಸೆ.6ರಂದು ಲಯನ್ಸ್ ಅಂಗಳವು ನಲಿಯುವ ಪುಟ್ಟ ಪುಟ್ಟ ರಾಧಾಕೃಷ್ಣರ ನಂದಗೋಕುಲದಂತೆ ಕಂಗೊಳಿಸುತ್ತಿತ್ತು. ಮಕ್ಕಳು ರಾಧಾಕೃಷ್ಣರ ವೇಷ ಧರಿಸಿದ್ದಲ್ಲದೆ, ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದರು.
ಶಾಲೆಯ ನರ್ಸರಿ ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳಿಂದ ನೃತ್ಯಗಳು ಪ್ರದರ್ಶನಗೊಂಡವು. ಒಂದರಿಂದ ನಾಲ್ಕನೇ ತರಗತಿಯ ಕೆಲವು ವಿದ್ಯಾರ್ಥಿಗಳು ಭಗವದ್ಗೀತೆಯ ಅರ್ಥಸಹಿತ ಶ್ಲೋಕ, ಕಥೆ ಮತ್ತು ಶ್ರೀಮತಿ ದೀಪಾ ಶಶಾಂಕ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಜನೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶಶಾಂಕ್ ಹೆಗಡೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಅಶೋಕ ಹೆಗಡೆ,ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಲ. MJF ಪ್ರಭಾಕರ ಹೆಗಡೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವೀಂದ್ರ ನಾಯಕ್, ಲಯನ್ಸ್ ಕ್ಲಬ್ ಖಜಾಂಚಿ ಶ್ರೀಮತಿ ಶರಾವತಿ ಭಟ್, ಸದಸ್ಯರಾದ ಲ.ಅಶ್ವತ್ಥ್ ಹೆಗಡೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ವತಿಯಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀಮತಿ ಸಂಧ್ಯಾ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿ, ಸರ್ವರನ್ನು ವಂದಿಸಿದರು.