ಶಿರಸಿ: ಇಲ್ಲಿನ ಕರಕುಶಲ ಕಲಾವಿದೆ, ಗಾಯಕಿ ರೇಖಾ ಸತೀಶ ಭಟ್ಟ ನಾಡ್ಗುಳಿ ಅವರಿಗೆ ರಾಜ್ಯ ಸರಕಾರದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನೀಡುವ ರಾಜ್ಯ ಮಟ್ಟದ ಕರಕುಶಲ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಲಾಯಿತು.
ಬೆಂಗಳೂರಿನಲ್ಲಿ ಕಾವೇರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ 25 ಸಾವಿರ ರೂಪಾಯಿ ನಗದು ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿಶ್ವನಾಥ, ಪ್ರಧಾನ ವ್ಯವಸ್ಥಾಪಕ ಜಿ.ನಾಗೇಂದ್ರಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಸೀರ್ ಇತರರು ಇದ್ದರು.
ರೇಖಾ ಭಟ್ಟ ಅವರು ಅಡಿಕೆ ಮತ್ತು ಕಾಳು ಮೆಣಸು ವರ್ತಕರ ಸಂಘದ ಅಧ್ಯಕ್ಷ ಸತೀಶ ಭಟ್ಟ ಅವರ ಪತ್ನಿಯಾಗಿದ್ದು ಕಸದಿಂದ ರಸ ತಯಾರಿಕೆ, ಕರಕುಶಲ, ಪೇಂಟಿಂಗ್ ವರ್ಕ್ಸ್, ಸಾರಿ, ಡಿಸೈನ್, ರಂಗೋಲಿ, ಮೆಹಂದಿ ಚಿತ್ತಾರ ಕಲೆಗಳಲ್ಲಿ ಸಾಧನೆ ಮಾಡಿದ್ದು, ಅದರೊಂದಿಗೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಕ್ತಿ ಗೀತೆ, ಚಲನಚಿತ್ರ ಗೀತೆಗಳನ್ನು ಹಾಡಿ ಮನೆಮಾತಾಗಿದ್ದಾರೆ. ಶಿರಸಿ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ನಡೆದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ನಿರ್ಣಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವುದು ಉಲ್ಲೇಖನೀಯ.