ಅಂಕೋಲಾ: ತಾಲೂಕಿನ ಹೊಸಕಂಬಿ ಗಂಗಾವಳಿ ನದಿಯ ಸೇತುವೆ ನದಿ ದಂಡೆಯಲ್ಲಿ ಗುರುವಾರ ಸಾಯಂಕಾಲ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮೊಸಳೆ ಕಾಣಿಸಿಕೊಂಡಿರುವ ಎರಡೂ ದಂಡೆಯ ಆಸುಪಾಸಿನಲ್ಲಿ ಕೃಷಿ ಜಮೀನುಗಳು ಇದ್ದು, ನಿತ್ಯ ಕೃಷಿ ಕಾರ್ಯಗಳಿಗಾಗಿ ಅಲ್ಲಿಯೆ ಇರುತ್ತಾರೆ ಮತ್ತು ನದಿ ದಡಕ್ಕೆ ತೆರಳುವುದು ಸಹಜ. ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಮೊಸಳೆಯಿಂದ ಸ್ಥಳೀಯ ಜನರು ಕೂಡ ಆತಂಕಗೊಂಡಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆ ಗಂಗಾವಳಿ ನದಿಯಲ್ಲಿ ನದಿಯಲ್ಲಿ 1 ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಅದೆ ಮೊಸಳೆ ಗಂಗಾವಳಿ ನದಿಯ ಹೊಸಕಂಬಿ ಬಳಿ ಕಾಣಿಸಿಕೊಂಡಿದೆ.
ಹೊಸಕಂಬಿ ಗ್ರಾಮ ಸೇರಿದಂತೆ ಹಿಲ್ಲೂರು ಕುಂಟಕಣಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಮೊಸಳೆ ಕಾಣಿಸಿಕೊಂಡ ವಿಷಯವನ್ನು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.