ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಜರುಗಿಸಲು ಕಾನೂನು ಇಲಾಖೆ ಚಿಂತಿಸಿದೆ. ಅಲ್ಲದೇ, ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕೆಂಬ ಸುಫ್ರೀಂ ಕೋರ್ಟನಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಅವರು ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಬೆಂಗಳೂರಿನ ಕಾನೂನು ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾದ ನಿಯೋಗಕ್ಕೆ ಅವರು ಮೇಲಿನಂತೆ ಹೇಳಿದರು.
ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಅರಣ್ಯ, ಸಮಾಜ ಕಲ್ಯಾಣ, ಬುಡಕಟ್ಟು ಮತ್ತು ಕಾನೂನು ಇಲಾಖೆಯ ಒಳಗೊಂಡು ಉನ್ನತ ಮಟ್ಟದ ಸಭೆ ಜರುಗಿಸಿ, ಅರಣ್ಯವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರಕಾರ ಚಿಂತಿಸುತ್ತಿದೆ. ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಲಂಬಿತವಾಗಿರುವ ಅರಣ್ಯವಾಸಿಗಳ ಹಿತ ಕಾಪಾಡಲು ಸರಕಾರ ಬದ್ಧವಾಗಿದ್ದು, ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಬಾರದೆಂದು ಅವರು ತಿಳಿಸಿದರು.
ರವೀಂದ್ರ ನಾಯ್ಕ ಅವರ ನೇತೃತ್ವದ ನಿಯೋಗದಲ್ಲಿ ಹಿರಿಯ ಹೋರಾಟಗಾರರಾದ ಜಿ.ಎಮ್.ಶೆಟ್ಟಿ ಅಂಕೋಲಾ, ಬಾಲಚಂದ್ರ ಶೆಟ್ಟಿ ಅಚಿವೆ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸುನೀಲ್ ನಾಯ್ಕ ಸಂಪಖಂಡ, ಯಲ್ಲಾಪುರ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ನಾಗರಾಜ ಮರಾಠಿ, ದಿನೇಶ್ ನಾಯ್ಕ ಬೇಡ್ಕಣಿ ಮುಂತಾದವರು ಉಪಸ್ಥಿತರಿದ್ದರು.