ಕುಮಟಾ: ವಿದ್ಯಾರ್ಥಿ ಪರಿಷತ್ ಎನ್ನುವುದು ನಾಯಕತ್ವದ ಗುಣವನ್ನು ಬೆಳೆಸುತ್ತದೆ. ದೇಶದ ಮಹಾನ್ ನಾಯಕರಾಗುವಲ್ಲಿ ವಿದ್ಯಾರ್ಥಿ ಪರಿಷತ್ ಮುಖ್ಯ ವೇದಿಕೆಯಾಗಲಿದೆ. ವಿದ್ಯಾರ್ಥಿ ಸಂಘಟನೆ ಎನ್ನುವುದು ಸಮಾಜದಲ್ಲಿ ಅನೇಕ ಬದಲಾವಣೆ ತರುತ್ತದೆ ಎಂದು ಕುಟುಂಬ ಯೋಜನಾ ನಿವೃತ್ತ ಅಧಿಕಾರಿ ಎಂ.ಎನ್.ಹೆಗಡೆ ಹೇಳಿದರು.
ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪಿ.ಯೂ.ವಿಭಾಗದ ವಿದ್ಯಾರ್ಥಿ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪಿಯೂ ದ್ವಿತಿಯ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿ ಜಿಲ್ಲೆಗೆ 9ನೇ ರ್ಯಾಂಕ್ ಪಡೆದ ಶಿವಾನಿ ರೇವಣಕರ (ಶೇ 97.7) ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರದಲ್ಲಿ ಶೇ 100 ಅಂಕಗಳಿಸಿದ್ದು, ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಅರ್ಥಶಾಸ್ತ್ರದಲ್ಲಿ ಶೇ 100 ಅಂಕ ಗಳಿಸಿರುವ ಅರ್ಪಿತಾ ಶೆಟ್ಟಿ, ವಾಣಿಜ್ಯ ಶಾಸ್ತçದಲ್ಲಿ ದೀಪಾಶ್ರೀ ಸಭಾಹಿತ್, ಕಂಪ್ಯೂಟರ್ನಲ್ಲಿ ಮುಸ್ಪಿರಾ ಇಸ್ಮಾಯಿಲ್ ಬಬ್ಲು, ಸಂಸ್ಕೃತದಲ್ಲಿ ವಿಜಯಕುಮಾರ ಗುನಗಾ ಮತ್ತು ವೇದಾ ಅಂಬಿಗ ಅವರುಗಳಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. 80ಕ್ಕೂ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆನಾರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೃಢತೆ ಇದ್ದಲ್ಲಿ ತಪ್ಪುದಾರಿ ಹಿಡಿದವರನ್ನು ಹೇಗೆ ಸುಧಾರಿಸಬಹುದು ಎಂದು ಅನೇಕ ಉದಾಹರಣೆ ಮೂಲಕ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ.ಎನ್.ಜಿ.ಹೆಗಡೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಯತ್ನ ಮತ್ತು ಉಪನ್ಯಾಸಕರ ಪರಿಶ್ರಮವು ಕಾಲೇಜಿನ ಕಿರ್ತಿ ಹೆಚ್ಚುವಂತೆ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ,ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ,ವಿದ್ಯಾರ್ಥಿ ಕಾರ್ಯದರ್ಶಿ ಆಯೂಷ ಶೇಟ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಯುನಿಯನ್ ಕಾರ್ಯಾಧ್ಯಕ್ಷರಾದ ಪ್ರೊ.ಯೋಗೀಶ ಭಟ್ಟ ಸ್ವಾಗತಿಸಿ ಪರಿಚಯಿಸಿದರು. ನವ್ಯಾ ಹೆಬ್ಬಾರ್ ಮತ್ತು ರಶ್ಮಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.