ಶಿರಸಿ: 2012ರಲ್ಲಿ ಕಂದಾಯ ಇಲಾಖೆಯು ಪಹಣಿ ಪತ್ರಿಕೆ ಸರಿಪಡಿಸುವ ಸುತ್ತೋಲೆಗೆ ಅನುಗುಣವಾಗಿ ಬೆಟ್ಟಭೂಮಿಯ ಪಹಣಿಯ ಕಾಲಂ ನಂ.3ರಲ್ಲಿ ವಿಸ್ತೀರ್ಣವನ್ನು ಬ ಖರಾಬ್ ಎಂದು ಹಾಗೂ ಕಾಲಂ ನಂ.9ರಲ್ಲಿ ವಿಸ್ತೀರ್ಣವನ್ನು ಶೂನ್ಯಗೊಳಿಸಿದೆ. ಆಕಾರಬಂದ್ ಗೆ ಅನುಗುಣವಾಗಿ ಬದಲಾವಣೆ ಕೈಗೊಂಡಿದೆ. 1965ಕ್ಕಿಂತಲೂ ಹಿಂದೆ ಗ್ರಾಮ ನಮೂನೆ ನಂ.1ರಲ್ಲಿ ಯಾವುದೇ ಖರಾಬಿಗೆ ಒಳಪಡದ ಬೆಟ್ಟ ಭೂಮಿಯನ್ನು ತದನಂತರದಲ್ಲಿ ಏಕಾಏಕಿ ಆಕಾರ್ಬಂದ್ ನಲ್ಲಿ ಬ ಖರಾಬಿಗೆ ಒಳಪಡಿಸಿ ಅದರ ಆಧಾರದ ಮೇಲೆ ಬದಲಾವಣೆ ಮಾಡಲಾಗಿದೆ. ಈ ಕ್ರಮ ಕೈಬಿಟ್ಟು ಆಕಾರಬಂದ್ ದುರಸ್ಥಿಗೊಳಿಸಿ 2013ರ ಪೂರ್ವದಲ್ಲಿರುವಂತೆ ಪಹಣಿ ನಮೂದಾಗುವಂತೆ ಸರಕಾರ ಕ್ರಮ ಕೈಗೊಂಡು ಬೆಟ್ಟ ಬಳಕೆದಾರರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ಟಿಆರ್ಸಿ ಸಭಾಭವನದಲ್ಲಿ ನಡೆದ ಬೆಟ್ಟ ಬಳಕೆದಾರರ ಸಮಾಲೋಚನಾ ಸಭೆಯಲ್ಲಿ ಬ ಖರಾಬನ್ನು ಕೈಬಿಡುವಂತೆ ಒತ್ತಾಯಿಸಲಾಯಿತು. ಉತ್ತರಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಕೃಷಿಕರಿಗೆ 18ನೇ ಶತಮಾನದಲ್ಲಿ (1869)ಅಡಿಕೆ ಮತ್ತು ಸಾಂಬಾರ ಬೆಳೆಗಳ ಅಭಿವೃದ್ಧಿಗಾಗಿ ಹಾಗೂ ತೋಟಿಗ ಕೃಷಿಗೆ ಅತ್ಯವಶ್ಯಕವಾದ ಅರಣ್ಯ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಬೆಟ್ಟ ಭೂಮಿಯನ್ನು ಕೆನರಾ ಪ್ರಿವಿಲೇಜ್ ಆಕ್ಟ್ ಅಡಿಯಲ್ಲಿ ಬ್ರಿಟಿಶ್ ಆಳ್ವಿಕೆಯಲ್ಲಿಯೇ ನೀಡಲಾಗಿದೆ. 1923ನೇ ಇಸ್ವಿಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಅರಣ್ಯ ಹಕ್ಕುಗಳಿಗೆ ಸಂಬoಧಿಸಿ ಮಂಜೂರಾತಿ ನಿಯಮ ರೂಪಿಸಿ ನಿರ್ದಿಷ್ಟ ಪ್ರಮಾಣದ ಬೆಟ್ಟ ಭೂಮಿಗಳನ್ನು ಅವುಗಳ ಉಪಯೋಗ ಪಡೆದುಕೊಳ್ಳಲು ನಿಗದಿಪಡಿಸಿದ ಅಡಿಕೆ ಕ್ಷೇತ್ರಕ್ಕೆ ಅಧಿಕೃತವಾಗಿ ಪಹಣಿಯಲ್ಲಿ ಸೂಚಿಸಲಾಗಿದೆ. ನಮ್ಮ ಜಿಲ್ಲೆಯ ಬೆಟ್ಟಭೂಮಿ ಹಾಗೂ ಅಡಿಕೆ ಕ್ಷೇತ್ರಗಳು ಒಂದಕ್ಕೊ0ದು ಅವಿನಾಭಾವ ಸಂಬoಧವನ್ನು ಹೊಂದಿದೆ. ಕೃಷಿಕರು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ರೀತಿಯಲ್ಲಿ ಅಡಿಕೆ ಭಾಗಾಯ್ತ ಕ್ಷೇತ್ರಕ್ಕೆ ಬಿಟ್ಟ ಬೆಟ್ಟ ಭೂಮಿಯನ್ನು ಪಹಣಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಕೃಷಿಕರು ಈ ಭೂಮಿಗೂ ಸಹ ಭಾಗಾಯ್ತ ತೀರ್ವೆಯಲ್ಲಿ ಸೇರಿಸಿ ತೀರ್ವೆ ತುಂಬುತ್ತಿದ್ದಾರೆ. ಈ ಬೆಟ್ಟ ಭೂಮಿ ಅಸೈನ್ಡ್ (ASSIGNED) ಭೂಮಿಯಾಗಿದ್ದು, ಅದಕ್ಕೆ ಸಂಬ0ಧಪಟ್ಟ ತೋಟಿಗ ಕೃಷಿಕನು ವಹಿವಾಟುದಾರನಾಗಿರುತ್ತಾನೆ. ಬೆಟ್ಟ ಭೂಮಿಗೂ ತೀರ್ವೆ ಆಕರಣೆ ಆಗುತ್ತಿರುವುದರಿಂದ ಅದೂ ಕೂಡ ಮಾಲ್ಕಿ ಜಮೀನಿನ ಒಂದು ರೂಪವೇ ಆಗಿರುತ್ತದೆ.
ರಾಜ್ಯ ಸರ್ಕಾರದ ಆದೇಶ ಸಂಖ್ಯೆ ಅಪಜೀ 225,ಎಫ್.ಎ.ಎಫ್ 2012,ಬೆಂಗಳೂರು, ಕರ್ನಾಟಕ ಅರಣ್ಯ ಕೈಪಿಡಿ 131ಎಫ್ ನಲ್ಲಿ ನಮೂದಿಸಿದ ಸವಲತ್ತಿನಡಿ ಬೆಟ್ಟದಾರರಿಗೆ ನೀಡಲಾಗುವ ಲಾಭಾಂಶ ವನ್ನು 75:25ಕ್ಕೆ ಹೆಚ್ಚಿಸಿದೆ. ಬೆಟ್ಟಭೂಮಿಯು ಉತ್ತರಕನ್ನಡ ಜಿಲ್ಲೆಯ ತೋಟಿಗ ಕೃಷಿಕರಿಗೆ ನೀಡಿದ ವಿಶೇಷ ಹಕ್ಕು ಸೌಕರ್ಯವಾಗಿದ್ದು, ಇವುಗಳನ್ನು ಕೃಷಿಕರು ಆಸಕ್ತಿಯಿಂದ ಜೀವವೈವಿಧ್ಯತೆಯನ್ನು ಕಾಪಾಡಿಕೊಂಡು ರಕ್ಷಿಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಇತ್ತೀಚಿನ ವರ್ಷಗಳಲ್ಲಿ ಕಂದಾಯ ಇಲಾಖೆಯು ಬೆಟ್ಟಭೂಮಿಯನ್ನು ಪಹಣಿಯ ಕಾಲಂ.ನo.3ರಲ್ಲಿ ಪೂರ್ತಿಯಾಗಿ ಬ ಖರಾಬಿಗೆ ಒಳಪಡಿಸಿರುತ್ತದೆ. ಹಾಗೂ ಕಾಲಂ ನಂ.9 ರಲ್ಲಿ ವಿಸ್ತೀರ್ಣವನ್ನು ಶೂನ್ಯಗೊಳಿಸಿದೆ. ಬ ಖರಾಬಿಗೆ ಒಳಪಡುವ ಕ್ಷೇತ್ರವು ಸರ್ಕಾರದ ಹಕ್ಕಿಗೆ ಒಳಪಡುತ್ತದೆ ಎನ್ನುವುದು ಗಮನಿಸಬೇಕಾದ ವಿಷಯವಾಗಿದೆ. 2013ಕ್ಕಿಂತಲೂ ಪೂರ್ವದಲ್ಲಿ ಬೆಟ್ಟಭೂಮಿಗಳನ್ನು ಯಾವುದೇ ಖರಾಬ ಕ್ಷೇತ್ರಕ್ಕೆ ಒಳಪಡಿಸುತ್ತಿರಲಿಲ್ಲ. ಬ ಖರಾಬು ನಿಯಮದಂತೆ ಇದು ಸರ್ಕಾರದ ಸಾರ್ವಜನಿಕ ಭೂಮಿಯಾಗಲಿದೆ. ನೂರಾರು ವರ್ಷಗಳಿಂದ ಸಂರಕ್ಷಿಸಿ ಕೃಷಿಗೆ ಪೂರಕವಾಗಿ ಉಳಿಸಿಕೊಂಡ ಈ ಭೂಮಿಯು ಕಂದಾಯ ಇಲಾಖೆಯ ಈ ನಿರ್ಧಾರದಿಂದ ಅಡಿಕೆ ಕೃಷಿಕರ ಭವಿಷ್ಯಕ್ಕೆ ಮಾರಕವಾಗಿದೆ. ಸರ್ಕಾರವು ಸಂಬoಧಿಸಿದ ಕೃಷಿಕರಿಗೆ ಯಾವುದೇ ಸೂಚನೆ ನೀಡದೇ ಏಕಾಏಕಿ ಈ ಕ್ರಮ ಕೈಗೊಂಡಿದೆ. ಬ ಖರಾಬ ಕ್ಷೇತ್ರಕ್ಕೆ ಒಳಪಡಿಸುವುದರಿಂದ ಸರ್ಕಾರವು ತನ್ನ ಸ್ವಾದೀನಕ್ಕೆ ಈ ಭೂಮಿಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿದೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ.
ಈ ಕಾರಣಗಳಿಂದಾಗಿ ನಮ್ಮ ಜಿಲ್ಲೆಯ ತೋಟಿಗ ಕೃಷಿಕರಿಗೆ ನೀಡಿರುವ ವಿಶೇಷ ಸವಲತ್ತಾದ ಬೆಟ್ಟಭೂಮಿಯನ್ನು ಕೃಷಿಕರಿಗೇ ಉಳಿಸುವ ಸಂಬ0ಧ ರಾಜ್ಯ ಸರ್ಕಾರವು ಸೂಕ್ತ ನಿರ್ಣಯ ಕೈಗೊಂಡು 2013ಕ್ಕಿಂತ ಪೂರ್ವದಲ್ಲಿ ಯಾವ ರೀತಿಯಲ್ಲಿ ಬೆಟ್ಟ ಭೂಮಿಯ ಪಹಣಿಯಲ್ಲಿ ಕಾಲಂ ನಂ 3ರಲ್ಲಿ ಶೂನ್ಯ ಖರಾಬ ಎಂದು ನಮೂದಿಸಿ ಪಹಣಿಯ ಕಾಲಂ ನಂ.9ರಲ್ಲಿ ವಹಿವಾಟುದಾರರ ಹೆಸರು ಹಾಗೂ ಕ್ಷೇತ್ರವನ್ನು ನಮೂದಿಸಬೇಕು ಹಾಗೂ ಇದೀಗ ನಮೂದಿಸಿದ ಬ ಖರಾಬ್ ಅನ್ನು ತೆಗೆದು ಹಾಕುವ ಕುರಿತು ಸಂಬ0ಧಿಸಿದ ಇಲಾಖೆ ಹಾಗೂ ಸಚಿವರಿಗೆ ಮತ್ತು ಶಾಸಕ ಭೀಮಣ್ಣ ನಾಯ್ಕ ಮೂಲಕ ಸರಕಾರಕ್ಕೆ ಮನವರಿಕೆ ಮಾಡಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೆ.ಎಮ್.ಎಫ್ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ ಮಾತನಾಡಿ, ಅಡಿಕೆ ಬೆಳೆಗಾರರಿಗೆ ಮೊದಲಿನಿಂದಲೂ ಸಂಕಷ್ಟಗಳು ತಪ್ಪಿದ್ದಲ್ಲ. ಬೆಳೆನಾಶ, ಬೆಲೆಗಳಲ್ಲಾಗುವ ಏರಿಳಿತ, ಕೂಲಿಕಾರ್ಮಿಕರ ಸಮಸ್ಯೆ ಮುಂತಾದ ಅನೇಕ ಸಮಸ್ಯೆಗಳನ್ನು ದಿನನಿತ್ಯ ಅನುಭವಿಸುತ್ತಿದ್ದೇವೆ. ಅವುಗಳ ಹೊರತಾಗಿ ಸರ್ಕಾರ ಹಾಗೂ ಕಂದಾಯ ಇಲಾಖೆಗಳು ರೂಪಿಸುತ್ತಿರುವ ತೋಟಗಾರರ ವಿರುದ್ದದ ಇಂತಹ ಧೋರಣೆಗಳು ಸಂಕಷ್ಟದ ಕರೆಗಂಟೆಯಾಗಿದೆ. ಈ ಬಗ್ಗೆ ಪರಿಣಾಮಕಾರಿಯಾದ ಹೋರಾಟದ ಅಗತ್ಯತೆ ಇದೆ ಎಂದರು.
ಪರಿಸರ ತಜ್ಞ ಹಾಗೂ ಬರಹಗಾರರಾದ ಶಿವಾನಂದ ಕಳವೆ ಮಾತನಾಡಿ, ಯಾವಾಗಲೂ ಖರಾಬು ಕ್ಷೇತ್ರ ಒಂದು ಸರ್ವೆ ನಂಬರಿನ ಕೆಲವು ಗುಂಟೆ ಕ್ಷೇತ್ರಕ್ಕೆ ಸೀಮಿತವಿರಬೇಕು. ಆದರೆ ಬೆಟ್ಟಭೂಮಿಯ ಸಂಪೂರ್ಣ ಕ್ಷೇತ್ರವನ್ನು ಬ ಖರಾಬಿಗೆ ಸೇರಿಸಿ ಅಡಿಕೆ ತೋಟಿಗರಿಗೆ ನೀಡಲಾದ ಭೂಮಿಯನ್ನು ಸಾರ್ವಜನಿಕ ಭೂಮಿಯಾಗಿ ಮಾಡಿರುವುದು ವಿಪರ್ಯಾಸ. 50-55 ಸಾವಿರ ಹೆಕ್ಟೇರ್ ಪ್ರದೇಶವನ್ನು ಯಾವ ಪರಿಶೀಲನೆ ಇಲ್ಲದೇ ಸ್ಥಳ ಪರಿಸ್ಥಿತಿ ಅರಿಯದೇ ಏಕಾಏಕಿಯಾಗಿ ಬ ಖರಾಬು ಎಂದು ಮಾಡಿರುವುದು ಆಡಳಿತದ ಮೂರ್ಖತನದ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಬೆಟ್ಟಬಳಕೆದಾರರು ಎಚ್ಚೆತ್ತುಕೊಂಡು ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ದರಾಗಬೇಕೆಂದು ಕರೆ ನೀಡಿದರು.
ರೈತ ಪ್ರಮುಖರಾದ ಹಾಗೂ ಬೆಟ್ಟಭೂಮಿಯ ಬಗ್ಗೆ ಅಧ್ಯಯನ ಕೈಗೊಂಡ ವಿಶ್ವನಾಥ ಹೆಗಡೆ ಪುಟ್ನಮನೆ, ಎಮ್.ಎನ್.ಹೆಗಡೆ ಮುಂಡಿಗೇಸರ, ದೀಪಕ ಹೆಗಡೆ ದೊಡ್ಡೂರು, ಶ್ರೀಕೃಷ್ಣ ಹೆಗಡೆ ಲಿಂಗದಕೋಣ ಹಾಗೂ ಕೃಷಿಕರಾದ ಗಜಾನನ ಹೆಗಡೆ ದೊಡ್ಮನೆ, ಜಗದೀಶ ಭಟ್ಟ ಕಳವೆ, ಸೀತಾರಾಮ ಹೆಗಡೆ ಕಿಬ್ಬಳ್ಳಿ, ಸತ್ಯನಾರಾಯಣ ಹೆಗಡೆ ಕಲ್ಲಳ್ಳಿ, ವಿಶ್ವನಾಥ ಶರ್ಮಾ ನಾಡಗುಳಿ ಮುಂತಾದವರು ಸಮಾಲೋಚನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಿ.ಜಿ.ಭಟ್ಟ ಬರಗದ್ದೆ, ಜಿ.ಆರ್.ಹೆಗಡೆ ಬೆಳ್ಳೇಕೇರಿ, ಗೋಪಾಲ ಹೆಗಡೆ ಮೆಣ್ಸೀಕೇರಿ ವೇದಿಕೆಯಲ್ಲಿದ್ದರು. ಎಸ್.ಕೆ.ಭಾಗ್ವತ್ ಶಿರ್ಸಿಮಕ್ಕಿ ಪಾಸ್ತಾವಿಕ ಮಾತನಾಡಿದರು. ಟಿ.ಆರ್.ಸಿ ಸಿಬ್ಬಂದಿ ಜಿ.ಜಿ.ಹೆಗಡೆ ಕುರುವಣಿಗೆ ನಿರ್ವಹಿಸಿದರು. ಟಿ.ಆರ್.ಸಿ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 250 ಕ್ಕೂ ಹೆಚ್ಚಿನ ತೋಟಿಗ ಕೃಷಿಕರು ಪಾಲ್ಗೊಂಡಿದ್ದರು.