ಹೊನ್ನಾವರ: ಕರ್ಕಿ ಗ್ರಾಮಸ್ಥರ ಮನವಿ ಮೇರೆಗೆ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾರವರು ಕರ್ಕಿ ಗ್ರಾಮದ ತೊಪ್ಪಲಕೇರಿಯ ಸಮುದ್ರ ಕೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ನಾಯ್ಕ ಮತ್ತು ವಿನೋದ ನಾಯ್ಕ ಮಾತನಾಡಿ, ಈ ಭಾಗದ ನಿವಾಸಿಗಳು ಪ್ರಾಣ ಭಯದಿಂದ ಬದುಕುತ್ತಿದ್ದು, ಇದೇ ರೀತಿ ಮುಂದುವರಿದಲ್ಲಿ ಸ್ಥಳೀಯ ಜನರ ಬದುಕು ಚಿಂತಾಜನಕವಾಗಲಿದೆ ಎಂದರು. ಜನಪ್ರತಿನಿಧಿಗಳು ಯಾರು ಕೂಡಾ ಇಲ್ಲಿಯ ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಉತ್ಸುಕತೆ ತೋರದೇ, ಕೇವಲ ಆಶ್ವಾಸನೆ ರೂಪದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಕೋಟಿ ಬೇರೆ ಅನಗತ್ಯ ಕಾಮಗಾರಿಗಳಿಗೆ ವ್ಯಯ ಮಾಡುತ್ತಿರುವ ಸರಕಾರಗಳು, ಕೇವಲ 17 ಕೋಟಿ ರೂಪಾಯಲ್ಲಿ ಇಲ್ಲಿ ತಡೆಗೋಡೆ ನಿರ್ಮಿಸಿ ಸಮುದ್ರ ಕೊರೆತದಿಂದಾಗುವ ಆಸ್ತಿ ಪಾಸ್ತಿ ಮತ್ತು ಜೀವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು. ಇದಕ್ಕೆ ಉತ್ತರಿಸಿದ ನಿವೇದಿತ್ ಆಳ್ವಾ, ಇಲ್ಲಿಯ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವ್ಯೆದ್ಯ ಅವರೊಂದಿಗೆ ಮಾತನಾಡುತ್ತೇನೆ. ಸ್ಥಳಕ್ಕೆ ಅವರನ್ನು ಕರೆತಂದು, ಸಮುದ್ರ ಕೊರೆತದಿಂದ ಆಗುವ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ನೆರೆದ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಸ್ಥಳೀಯ ಮುಖಂಡರಾದ ಕಮಲಾಕರ ಮುಕ್ರಿ, ಅಭಿಷೇಕ್ ತಾಂಡೆಲ್, ಸತೀಶ ನಾಯ್ಕ, ಸುನೀಲ ವರ್ಗಿಸ್, ಸಣ್ತಮ್ಮ ನಾಯ್ಕ, ಕಲ್ಪನಾ ರ್ಹೋನಾ, ಮಾದೇವ ನಾಯ್ಕ,ಹನೀಪ ಶೇಖ, ಮನ್ಸೂರ್ ಸೈಯದ್ ಇನ್ನೂ ಹಲವಾರು ಮುಖಂಡರು ಇದ್ದರು.