ಕಾರವಾರ: ಜಿಲ್ಲೆ, ರಾಜ್ಯದಲ್ಲಿ ಸಂಭವನೀಯ ಗಲಭೆಗಳನ್ನ ತಡೆಯಲು ಈ ಹಿಂದಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಗಟ್ಟಿಯಾದ ನಿರ್ಧಾರ ಕಾರಣ ಎನ್ನುವುದನ್ನ ಜಿಲ್ಲಾ ಉಸ್ತುವಾರಿ ಸಚಿವರು ಅರ್ಥ ಮಾಡಿಕೊಳ್ಳಬೇಕಿದೆ. ಇನ್ನುಮುಂದಾದರೂ ಈ ಹಿಂದಿನ ತಪ್ಪುಗಳು ಮರುಕಳಿಸದಂತೆ ಸಚಿವರು ಆಡಳಿತ ನೀಡಬೇಕಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಕಿವಿಮಾತು ಹೇಳಿದ್ದಾರೆ.
ಒಂದು ಸಮುದಾಯವನ್ನ ಪರಿಷ್ಟ ಜಾತಿಗೆ ಸೇರಿಸಲು ಜಿಲ್ಲಾಧಿಕಾರಿ ಸಹಕರಿಸಿಲ್ಲ ಎಂಬ ಕಾರಣಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬುದು ಬಹುತೇಕ ಪತ್ರಿಕೆಗಳಲ್ಲಿ ವರದಿಯಾಗಿ ಬಹಿರಂಗವಾಗಿದೆ. ಕವಳಿಕಟ್ಟಿಯವರು ಒಬ್ಬ ವ್ಯಕ್ತಿಯ ಸೇವಕರಾಗದೇ ಕಾನೂನಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದ್ದರಿಂದಲೇ ಜಿಲ್ಲಾ ಉಸ್ತುವಾರಿ ಸಚಿವರ ಖುರ್ಚಿ ಈವರೆಗೆ ಭದ್ರವಾಗಿದೆ ಮತ್ತು ಸರ್ಕಾರವೂ ಸಂಕಟದಿ0ದ ಬಚಾವಾದಂತಾಗಿದೆ ಎಂದಿದ್ದಾರೆ.
ಒOದುವೇಳೆ ಕಾನೂನು ಮೀರಿ ಕವಳಿಕಟ್ಟಿಯವರು ಪ್ರಮಾಣಪತ್ರ ನೀಡಲು ಸಹಕರಿಸಿದ್ದೇ ಆದರೆ ಜಿಲ್ಲೆ, ರಾಜ್ಯದಲ್ಲಿ ದಲಿತರ ದಂಗೆಯೇ ಏಳುವ ಸಾಧ್ಯತೆಯೂ ಇತ್ತು! ಅದು ಈಗ ಗೊತ್ತಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಇದರ ನಿಯಂತ್ರಣ ಸವಾಲಾಗುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೂ ಮುಜುಗರ ತರಲಿತ್ತು. ಹೀಗಾಗಿ ಇದೆಲ್ಲವನ್ನೂ ಅರಿತೇ ಕವಳಿಕಟ್ಟಿಯವರು ತಟಸ್ಥರಾಗಿ, ಯಾರ ಶಿಫಾರಸ್ಸಿಗೂ ಮಣಿದಿರಲಿಲ್ಲ. ಆದರೆ ಅದೇ ಅವರಿಗೆ ಮುಳುವಾಯಿತೆನ್ನುವುದು ವಿಪರ್ಯಾಸ ಎಂದಿದ್ದಾರೆ.
ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳ ವರ್ಗಾವಣೆಯ ಪೂರ್ವ ಇದೆಲ್ಲವನ್ನೂ ಅರಿತುಕೊಳ್ಳಬೇಕಿತ್ತು. ಜಿಲ್ಲಾಧಿಕಾರಿಯವರ ನಿರ್ಧಾರದಿಂದ ತಮಗೇನು ಒಳಿತಾಗಿದೆ ಎಂಬುದನ್ನೂ ಯೋಚಿಸಬೇಕಿತ್ತು. ಕಾನೂನು ಮೀರಿ ಜಿಲ್ಲಾಧಿಕಾರಿ ನಿರ್ಧಾರ ಕೈಗೊಂಡಿದ್ದರೆ ಏನೆಲ್ಲ ಅನಾಹುತಗಳು ಸೃಷ್ಟಿಯಾಗುತ್ತಿತ್ತು ಎನ್ನುವುದನ್ನ ಮನವರಿಕೆ ಮಾಡಿಕೊಳ್ಳಬೇಕಿತ್ತು. ಕಾನೂನುಬದ್ಧವಾಗಿ ಯಾರಿಗೇ ಯಾವ ಸವಲತ್ತು ನೀಡಿದರೂ ಯಾರ ಅಭ್ಯಂತರವಿಲ್ಲ. ಆದರೆ ಅದು ಕಾನೂನು ಮೀರಬಾರದು. ಕಾನೂನು ಮೀರಿದ ಕೆಲಸಗಳಿಗೆ ಯಾರೇ ಆದರೂ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.