ಭಟ್ಕಳ: ಪಟ್ಟಣದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೂತನ ಪದಾಧಿಕಾರಿಗಳಿಗೆ ಮಿಟಿಂಗ್ ನೋಟಿಸ್ ನೀಡಿ ಮೀಟಿಂಗ್ ನಡೆಸಲು ಅವಕಾಶ ನೀಡದ ಪ್ರಧಾನ ವ್ಯವಸ್ಥಾಪಕರ ನಡೆಗೆ ಆಡಳಿತ ಮಂಡಳಿ ಅಧ್ಯಕ್ಷರ ಬಣದ ನಿರ್ದೇಶಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇತ್ತೀಚಿಗೆ ಇಲ್ಲಿನ ಮಹಿಳಾ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಕಳೆದ 33 ವರ್ಷಗಳಿಂದ ಅಧ್ಯಕ್ಷ ಗಾದಿಯಲ್ಲಿದ್ದ ಲಕ್ಷ್ಮಿ ನಾಯ್ಕ ಮತ್ತು ನಯನ ನಾಯ್ಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದರು. ಅದರಲ್ಲಿ ನಯನಾ ನಾಯ್ಕ ಅವರು ವಿಜಯಿಯಾಗಿದ್ದರು. ಅದರಂತೆ ಸೋಮವಾರ ಆಡಳಿತ ಮಂಡಳಿಯ ಸಭೆ ನಡೆಸಲು ಮಿಟಿಂಗ್ ಕರೆದಿದ್ದರು. ಇನ್ನೇನು ಮಿಟಿಂಗ್ ಆರಂಭವಾಗಬೇಕು ಎನ್ನುವಷ್ಟರಲ್ಲಿ ಲಕ್ಷ್ಮಿ ನಾಯ್ಕ ಬಣದ ಸದಸ್ಯರಾದ ಚಂದ್ರಪ್ರಭಾ ನಾಯ್ಕ, ಲಕ್ಷ್ಮಿ ಡಿ.ನಾಯ್ಕ, ಲಕ್ಷ್ಮಿ ಗೊಂಡ, ಬಿಬಿ ಹಾಜಿರಾ, ಭವಾನಿ ನಾಗರಾಜ ನಾಯ್ಕ ಮಿಟಿಂಗ್ ನಡೆಸದಂತೆ ಪ್ರಧಾನ ವ್ಯವಸ್ಥಾಪಕರಿಗೆ ತಡೆ ಒಡ್ಡಿದ್ದಾರೆ. ನಾವು ಈಗಾಗಲೆ ಹಾಲಿ 7 ಮಂದಿಯ ವಿರುದ್ಧ ಎಆರ್ ಆಫಿಸ್ನಲ್ಲಿ ದೂರು ನೀಡಿದ್ದು, ಅದು ಇತ್ಯರ್ಥವಾಗುವವರೆಗೂ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಪಟ್ಟುಹಿಡಿದಿದ್ದಾರೆ.
ಇದರಿಂದ ಆಕ್ರೋಶಗೊಂಡ ನೂತನ ಅಧ್ಯಕ್ಷೆ ಮಿಟಿಂಗ್ ನೋಟಿಸ್ ಜಾರಿ ಮಾಡಿದ ಮೇಲೆ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಪ್ರಧಾನ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಬೆದರಿಕೆ ಇದ್ದರೆ ಪೊಲೀಸ್ ಭದ್ರತೆ ಪಡೆಯಿರಿ, ಮಿಟಿಂಗ್ ಮಾಡದೆ ನಾವು ಇಲ್ಲಿಂದ ಕದಲುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪಧಾಧಿಕಾರಿಗಳ ಆಯ್ಕೆಯಾದ ಮೇಲೂ ಸಭೆ ನಡೆಸಲು ಬಿಡುವದಿಲ್ಲ ಎಂದರೆ ಮಹಿಳಾ ಸಂಘದಲ್ಲಿ ಏನೋ ಅವ್ಯವಹಾರವಾದ ಶಂಕೆ ಇದೆ ಎನ್ನುವದು ಮಲ್ನೋಟಕ್ಕೆ ಕಾಣುತ್ತಿದ್ದು ಯಾವುದೆ ಕಾರಣಕ್ಕೂ ಸಭೆ ನಡೆಸದೆ ನಾವು ಇಲ್ಲಿಂದ ಕದಲುವದಿಲ್ಲ ಎಂದು ಉಪಾಧ್ಯಕ್ಷೆ ಸುಕನ್ಯಾ ನಾಯ್ಕ, ಶೋಭಾ ನಾಯ್ಕ, ರಾಧಾ ಶ್ರೀಧರ ಮೊಗೇರ, ವಿಜಯಾ ಜಯಂತ ನಾಯ್ಕ, ಸುನೀತಾ ರೈಮಂಡ್ ಡಿಸೋಜಾ, ವೀಣಾ ರಾಮಚಂದ್ರ ನಾಯ್ಕ ಅಧ್ಯಕ್ಷೆ ನಯನಾ ನಾಯ್ಕ ಅವರೊಂದಿಗೆ ಧರಣಿಗೆ ಕುಳಿತಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಪ್ರಧಾನ ವ್ಯವಸ್ಥಾಪಕರು ಯಾವುದೇ ಮಾಹಿತಿ ನೀಡದೆ ಇಲ್ಲಿಂದ ತೆರಳಿದ್ದು, ನಯನಾ ನಾಯ್ಕ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳಾ ಸಂಘಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.