ಹಳಿಯಾಳ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದಂತೆ 10 ಕೆಜಿ ಅಕ್ಕಿ ಕೊಡಲು ಸಿದ್ಧರಿದ್ದು, ಇದಕ್ಕೆ ಬೇಕಾಗುವ ಸಾಕಷ್ಟು ಪ್ರಮಾಣದ ಅಕ್ಕಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಹಾರ ನಿಗಮದಲ್ಲಿ ಸಾಕಷ್ಟು ಪ್ರಮಾಣದ ಅಕ್ಕಿ ಇದ್ದರು ನಮ್ಮ ರಾಜ್ಯಕ್ಕೆ ಹೆಚ್ಚುವರಿ ಆಗಿ ನೀಡಲು ಹಿಂದೇಟು ಹಾಕಿದ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಕಾಂಗ್ರೆಸ್ ಸರ್ಕಾರ ಹೇಳಿದಂತೆ 5 ಕೆಜಿ ಅಕ್ಕಿ ಹಾಗೂ 5ಕೆಜಿ ಅಕ್ಕಿಯ ಹಣವನ್ನು ಕಾರ್ಡುದಾರರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸ್ತ್ರೀ ಶಕ್ತಿ ಯೋಜನೆ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದೆ. ಸ್ತ್ರೀಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಯಾವುದೇ ದುಷ್ಪರಿಣಾಮ ಆಗದೆ ವಿದ್ಯಾರ್ಥಿಗಳಿಗಾಗಿ ಆಸನಗಳನ್ನು ಕಾಯ್ದಿರಿಸಿಬೇಕು. ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಬಸ್ ಬಿಡಬೇಕು ಎಂದು ಹೇಳಿದರು.