ಶಿವಮೊಗ್ಗ: ಮನುಷ್ಯ ಯಾವುದೇ ವೃತ್ತಿಯಲ್ಲಿರಲಿ ಸಮಾಜ ಸೇವೆಯನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ನಾಗಭೂಷಣ ಹೇಳಿದರು. ಅವರು ತಮ್ಮ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ, ಎನ್.ಎಸ್.ಎಸ್.ನ ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳಾಗಿ ಪ್ರಶಸ್ತಿ ಪಡೆದ ಡಾ.ಬಾಲಕೃಷ್ಣ ಹೆಗಡೆ ಸೇವಾ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಡಾ.ಹೆಗಡೆಯವರು ತಮ್ಮ ಕಾಲೇಜಿಗೆ ಬಂದಾಗಿನಿಂದಲೂ ಉತ್ತಮ ಪಾಠ ಮಾಡಿ ಮಕ್ಕಳ ಮನಸ್ಸನ್ನು ಗೆದ್ದಿದ್ದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರೇ ಸ್ವತ: ಉತ್ತಮ ಕಲಾವಿದರೂ ಅಗಿದ್ದು ತಮ್ಮ ಜತೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ ಯಕ್ಷಗಾನ ಕಲಾವಿದರೂ ಆದ ಡಾ.ಹೆಗಡೆ ಕಾಲೇಜಿನ ಅನೇಕ ವಿದ್ಯಾರ್ಥಿನಿಯರಿಗೆ ಯಕ್ಷಗಾನ ತರಬೇತಿ ಕೊಡಿಸಿ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಶ್ರಮಿಸಿದ್ದರು ಎಂದು ಗುಣಗಾನ ಮಾಡಿದರು.
ಎನ್.ಎಸ್.ಎಸ್.ಎಂದರೆ ಡಾ.ಹೆಗಡೆ. ಡಾ.ಹೆಗಡೆ ಎಂದರೆ ಎನ್.ಎಸ್.ಎಸ್.ಎಂಬ ಪ್ರತೀತಿ ಆಗಿದೆ ಎಂದ ಅವರು ಸುದೀರ್ಘಕಾಲ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾಗಿ ಕಾಲೇಜಿಗೆ, ಎನ್.ಇ.ಎಸ್.ಆಡಳಿತ ಮಂಡಳಿಗೆ ಉತ್ತಮ ಹೆಸರು ಬರುವಂತೆ ಮಾಡಿದ್ದಾರೆ. ಅನೇಕ ವಿದ್ಯಾರ್ಥಿನಿಯರಲ್ಲಿ ನಾಯಕತ್ವ ಗುಣ ಬೆಳೆಸಲು ಡಾ.ಹೆಗಡೆ ಅವಿರತವಾಗಿ ಶ್ರಮಿಸಿದ್ದಾರೆ.ಡಾ.ಹೆಗಡೆ ಅವರು ಕಾಲೇಜಿಗೆ ದೊಡ್ಡ ಆಸ್ತಿಯಾಗಿದ್ದರು. ಅವರ ಸೇವಾ ನಿವೃತ್ತಿ ಕಾಲೇಜಿಗೆ ತುಂಬಲಾರದ ಹಾನಿಯಾಗಿದೆ. ಆದರೆ ಸೇವಾ ನಿವೃತ್ತಿ ಅನಿವಾರ್ಯ. ಅವರ ನಿವೃತ್ತಿ ಜೀವನ ಸಮಾಜಕ್ಕೆ ಇನ್ನಷ್ಟು ಉಪಯುಕ್ತವಾಗಲಿ ಎಂದು ಹಾರೈಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಎಂ.ಜಗದೀಶ ಮಾತನಾಡಿ ಡಾ.ಹೆಗಡೆ ಅವರಲ್ಲಿನ ಅಪಾರ ಪಾಂಡಿತ್ಯ ಕಾಲೇಜು ಮತ್ತು ವಿದ್ಯಾರ್ಥಿನಿಯರಿಗೆ ಅತ್ಯುಪಯುಕ್ತವಾಗಿತ್ತು. ಅವರು ಯಾರೊಂದಿಗೂ ಮನಸ್ತಾಪ, ದ್ವೇಷ, ವೈರತ್ವ ಕಟ್ಟಿಕೊಳ್ಳದೆ ಅಜಾತಶತ್ರುವಾಗಿದ್ದರು ಎಂದು ಹೇಳಿದರು. ಡಾ.ಓಂಕಾರಪ್ಪ, ಪ್ರೊ.ಸತ್ಯನಾರಾಯಣ, ಪ್ರೊ.ಉಜ್ಜಿನಪ್ಪ, ಪ್ರೊ.ಆಶಾಲತಾ, ಪ್ರೊ.ಸಾಕಮ್ಸೇ ಎಚ್.ಖಂಡೋಬರಾವ್, ನಿಧಿನ ಓಲಿಕಾರ್, ಪುರಾತತ್ವ ಇಲಾಖೆಯ ಪ್ರಭಾರ ನಿರ್ದೇಶಕ ಡಾ.ಶೇಜೇಶ್ವರ, ಪ್ರೊ.ಮಂಜುಳಾ, ವಿದ್ಯಾಶ್ರೀ ಬಿ.ಕೆ. ಮೊದಲಾದವರು ಡಾ.ಹೆಗಡೆ ಅವರ ವ್ಯಕ್ತಿತ್ವದ ಕುರಿತು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಹೆಗಡೆ, ಶಿವಮೊಗ್ಗಕ್ಕೆ ಬರುವ ಮೊದಲು ಈ ಪ್ರದೇಶ ತಮಗೆ ಅಪರಿಚಿತವಾಗಿತ್ತು. ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಂದಿನ ಕಾರ್ಯದರ್ಶಿಗಳಾದ ಗಿರಿಮಾಜಿ ರಾಜಗೋಪಾಲ ಹಾಗೂ ಜಂಟಿ ಕಾರ್ಯದಶಿಗಳಾಗಿದ್ದ ಎಸ್.ವಿ.ತಿಮ್ಮಯ ಅವರು ನನಗೆ ಈ ಕಾಲೇಜಿಗೆ ಸೇರಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಇಂದಿನ ಆಡಳಿತ ಮಂಡಳಿ, ಕಾಲೇಜಿನ ಎಲ್ಲ ಪ್ರಾಂಶುಪಾಲರು, ಅಧ್ಯಾಪಕರ-ಅಧ್ಯಾಪಕೇತರರು, ವಿಶೇಷವಾಗಿ ವಿದ್ಯಾರ್ಥಿನಿಯರು ನೀಡಿದ ಸಹಕಾರ ತಮಗೆ ಉತ್ತಮವಾಗಿ ಕೆಲಸ ರ್ನಿಹಿಸಲು ಪ್ರೋತ್ಸಾಹದಾಯಕವಾಗಿತ್ತು. ಪಾಠ ಪ್ರವಚನದ ಜತೆಗೆ ಸಂಶೋಧನೆ, ಶೈಕ್ಷಣಿಕ ಸಂಘ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಲು ಅನುಕೂಲವಾಯಿತು. ತಾವೇನೇ ಒಳ್ಳೆಯ ಕೆಲಸ ಮಾಡಿದರೂ ಕಾಲೇಜಿನ ಶ್ರೇಯೋಭಿವೃದ್ಧಿಗೇ ಆಗಿತ್ತು. ಈ ಕಾಲೇಜಿನಲ್ಲಿ ಸೇವೆಸಲ್ಲಿದ್ದು ಸಮಾಧಾನ, ಸಂತೋಷ ಎರಡೂ ಆಗಿದೆ. ಶಿವಮೊಗ್ಗದ ಚೆನ್ನುಡಿ ಬಳಗ, ಪರೋಪಕಾರಂ, ನಿರ್ಮಲ ತುಂಗಾ ಅಭಿಯಾನ, ಪರ್ಯಾವರಣ ಸಂರಕ್ಷಣಾ ಗತಿವಿಧಿ, ಉತ್ತಿಷ್ಠ ಭಾರತ ಮೊದಲಾದ ಪರಿಸರ ಸಂಘಟನೆಗಳ ಸಹಕಾರವನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರಲ್ಲರಿಗೆ ಆಭಾರಿಯಾಗಿರುವುದಾಗಿ ಡಾ.ಹೆಗಡೆ ಹೇಳಿದರು. ಡಾ.ಹೆಗಡೆ ಅವರ ಕುಟುಂಬಸ್ಥರಾದ ಅನಂತ ಹೆಗಡೆ ಜೋಗಿಮನೆ, ಶುಭಾ ನಾಗಪತಿ ಹೆಗಡೆ, ಉಮಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.