ಶಿರಸಿ: ಅಡಿಕೆ ಎಲೆಚುಕ್ಕೆ ರೋಗದ ಕುರಿತು ಹಗುರ ಭಾವನೆ ರೈತರಲ್ಲಿ ಸಲ್ಲದು. ತಕ್ಷಣವೇ ಆ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು. ಕಷ್ಟಕಾಲದಲ್ಲಿ ನಮ್ಮ ಟಿಎಸ್ಎಸ್-ಟಿಆರ್ಸಿಯಂತಹ ಸಂಸ್ಥೆಗಳು ರೈತ ಸದಸ್ಯರಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ಅವರು ಶುಕ್ರವಾರ ನಗರದ ಟಿಆರ್ಸಿ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆ, ಶಿರಸಿ, ಆತ್ಮ ಯೋಜನೆ ಹಾಗು ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿ, ಸಹಯೋಗದಲ್ಲಿ ನಡೆದ ಅಡಿಕೆ ಎಲೆಚುಕ್ಕಿ ರೋಗದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಎಲೆಚುಕ್ಕಿ ರೋಗದ ಎರಡು ಅಲೆ ರೈತರಿಗೆ ತೊಂದರೆ ಇಲ್ಲ. ಆದರೆ ಅದಕ್ಕಿಂತ ಹೆಚ್ಚಾದರೆ ಕಷ್ಟ, ಹಾಗಾಗಿ ತಕ್ಷಣವೇ ಜಾಗೃತಿ ಉಂಟುಮಾಡುವುದು ಅನಿವಾರ್ಯ ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎನ್.ಭಟ್ಟ ಬಿಸಲಕೊಪ್ಪ,
ಕರೋನಾ ಬಂದಾಗ ಇಟ್ಟುಕೊಂಡ ಎಚ್ಚರಿಕೆ ಅಡಿಕೆ ತೋಟದ ಮೇಲೆ ಇಟ್ಟುಕೊಳ್ಳಬೇಕು ಎಂದರು. ಹಿರಿಯ ಸಹಕಾರಿ ಎಸ್ ಕೆ ಭಾಗ್ವತ್ ಮಾತನಾಡಿ, ಬೆಳೆಗಾರರ ಅಳಲು ಸರಕಾರಕ್ಕೂ, ವಿಜ್ಞಾನಿಗಳಿಗೂ ತಲುಪಿಸುವ ಕಾರ್ಯ ಆಗಬೇಕು. ಆ ಕೆಲಸ ಇಂತಹ ಕಾರ್ಯಗಳಿಂದ ನಡೆದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಡಹಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಮಾತನಾಡಿ, ಎಲೆಚುಕ್ಕಿ ರೋಗಕ್ಕೆ ಫಂಗಸ್ ಮಾತ್ರವಲ್ಲ, ಬೇರೆ ಏನೇನು ಸಮಸ್ಯೆ ಎಂಬುದರ ಬಗೆಗೂ ವಿಜ್ಞಾನಿಗಳೂ ಆಳವಾಗಿ ಅಭ್ಯಾಸ ಮಾಡಿ ಹೇಳಬೇಕು. ಅಡಿಕೆಗೆ ಬೂಸ್ಟರ್ ಡೋಸ್ ಕೊಡಿಸಬೇಕು. ಎಲ್ಲ ವಿಜ್ಞಾನಿಗಳೂ ಸೇರಿ ಅಧ್ಯಯನ ಮಾಡಬೇಕು. ಆ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಒಂದಷ್ಟು ಹಣ ಇಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ CPCRI ಕಾಸರಗೋಡಿನ ವಿಜ್ಞಾನಿ ಡಾ. ವಿನಾಯಕ ಹೆಗಡೆ, ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ಕೃಷಿ ಸಲಹೆಗಾರ ವಿ.ಎಂ. ಹೆಗಡೆ ಶಿಂಗನಮನೆ, ಯುಎಚ್ಎಸ್ ಶಿರಸಿಯ ರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಸಾದ ಪಿ.ಎಸ್. ಎಲೆಚುಕ್ಕಿ ರೋಗದ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಸ್ವಾಗತಿಸಿದರು. ತೋಟಗಾರಿಕಾ ಅಧಿಕಾರಿ ಶಿವಾನಂದ ವಂದಿಸಿದರು. ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಶಾಸ್ತ್ರಿ ನಿರ್ವಹಿಸಿದರು.