ಶಿರಸಿ: ಗೃಹಲಕ್ಷ್ಮೀ, ಗೃಹಜ್ಯೋತಿ ಅಥವಾ ಯಾವುದೇ ಸರಕಾರಿ ಯೋಜನೆಗೆ ನಾಳೆ ಬನ್ನಿ ಎನ್ನದೇ, ಪಕ್ಷಾತೀತವಾಗಿ ಎಲ್ಲರಿಗೂ ತಲುಪಿಸಬೇಕು ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೂಚನೆ ನೀಡಿದರು.
ಅವರು ನಗರಸಭೆಯಲ್ಲಿ ಜು.24, ಸೋಮವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭರವಸೆ ಕೊಟ್ಟ ಎಲ್ಲ ಐದು ಯೋಜನೆ ಜಾರಿಗೆ ತರುತ್ತಿದೆ. ಸರಕಾರದ ಯೋಜನೆಯನ್ನು ಜಾತಿ, ಮತ, ಪಕ್ಷ, ಬೇಧ ಇಲ್ಲದೇ ಸಾರ್ವಜನಿಕರಿಗೆ ತಲುಪಿಸಬೇಕು.ಸಮಯದ ಅವಕಾಶ ಇದೆ. ಒತ್ತಡ ಮಾಡಿಕೊಳ್ಳದೇ ಅರ್ಜಿ ಸಲ್ಲಿಕೆ ಮಾಡಬೇಕು. ಒಮ್ಮೆಲೆ ಒತ್ತಡ ಆದರೆ ಸರ್ವರ್ ಡೌನ್ ಆಗಿ ಶಪಿಸುವಂತೆ ಆಗಬಾರದು. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಜನರಿಗೆ ಮಾಹಿತಿ ನೀಡಬೇಕು ಎಂದರು
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ, ಸದಸ್ಯ ಪ್ರದೀಪ ಶೆಟ್ಟಿ, ಪೌರಾಯುಕ್ತ ಕಾಂತರಾಜ, ಆರ್.ಎಂ. ವೆರ್ಣೇಕರ್ ಇತರರು ಇದ್ದರು.