ದಾಂಡೇಲಿ: ಆಶ್ರಯ ಮನೆ ಮಂಜೂರಾಗಿದೆ. ಇದ್ದಿರುವ ಮನೆಯನ್ನು ಕೆಡವಬೇಕೆಂದು ಮೇಲಿಂದ ಮೇಲೆ ಒತ್ತಡ ತಂದು ಮನೆಯನ್ನು ಕೆಡವಿ ಎಂಟು ವರ್ಷವಾದರೂ ಆಶ್ರಯ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡದೇ ತಾತ್ಕಾಲಿಕವಾಗಿ ನಿರ್ಮಿಸಲಾದ ಗುಡಿಸಲು ಮನೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬವೊಂದು ಕಳೆದ ಎಂಟು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಜೊಯಿಡಾ ತಾಲ್ಲೂಕಿನ ಪ್ರಧಾನಿ ಗ್ರಾಮ ಪಂಚಾಯ್ತಿಯ ಮಾನಾಯಿ ಗ್ರಾಮದ ಪರಿಶಿಷ್ಟ ಜಾತಿಯ ಲಕ್ಷ್ಮೀ ಶೇಖಪ್ಪ ಚಲವಾದಿಯವರು ಆಶ್ರಯ ಮನೆಗಾಗಿ 2014-2015 ರಲ್ಲಿ ಪ್ರಧಾನಿ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಅನುಗುಣವಾಗಿ ನಿಮಗೆ ಆಶ್ರಯ ಮನೆ ಮಂಜೂರಾಗಿದೆ. ಇದ್ದಿರುವ ಹಳೆ ಮನೆಯನ್ನು ತೆರವುಗೊಳಿಸಬೇಕೆಂದು ಗ್ರಾಮ ಪಂಚಾಯ್ತಿಯವರು ಮೇಲಿಂದ ಮೇಲೆ ಒತ್ತಡ ತಂದ ಹಿನ್ನಲೆಯಲ್ಲಿ 2016 ರಲ್ಲಿ ಇದ್ದ ಹಳೆ ಮನೆಯನ್ನು ಕೆಡವಿ, ಸದ್ಯ ವಾಸ್ತವ್ಯಕ್ಕೆ ತಾತ್ಕಾಲಿಕ ಶೆಡ್ ಒಂದನ್ನು ನಿರ್ಮಿಸಿ, ಈಗಲೂ ಅದೇ ಶೆಡ್ನಲ್ಲಿ ವಾಸ್ತವ್ಯವಿದ್ದು, ಮನೆಗಾಗಿ ಪ್ರತಿನಿತ್ಯ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಇದು ಇದೇ ರೀತಿ ಮುಂದುವರಿದಿದ್ದು, ಪ್ರಧಾನಿ ಗ್ರಾಮ ಪಂಚಾಯ್ತಿಗೆ ಲಕ್ಷ್ಮಿ ಚಲುವಾದಿ ಮಗ ಗಣೇಶ್ ಶೇಖಪ್ಪ ಚಲವಾದಿ ಭೇಟಿ ಮಾಡಿ ವಿಚಾರಿಸಿದಾಗ ಪಂಚಾಯ್ತಿ ಸಿಬ್ಬಂದಿ ಅಸ್ಪಷ್ಟವಾದ ಮಾಹಿತಿ ನೀಡಿದ್ದಾರೆ. ಕಂಪ್ಯೂಟರಿನಲ್ಲಿ ಮನೆಯಿದೆ ಎಂದು ತೋರಿಸಲಾಗುತ್ತಿದೆ. ಆದರೆ ಮನೆ ಕೆಡವಿ ಹೊಸದಾಗಿ ಪೌಂಡೇಶನ್ ನಿರ್ಮಿಸಿದ್ದು ಮಾತ್ರ ಇದ್ದರೂ, ಗ್ರಾ.ಪಂನ ಕಂಪ್ಯೂಟರಿನಲ್ಲಿ ಮನೆ ನಿರ್ಮಾಣವಾಗಿದೆ ಎಂದು ಗ್ರಾ.ಪಂ ಸಿಬ್ಬಂದಿಗಳು ಹೇಳುತ್ತಿದ್ದಾರೆ ಎಂದು ಗಣೇಶ್ ಶೇಖಪ್ಪ ಚಲವಾದಿಯವರು ಗ್ರಾ.ಪಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ನಮಗೆ ತುರ್ತು ಮನೆ ಬೇಕಾಗಿದ್ದು, ಕೂಡಲೆ ಆಶ್ರಯ ಮನೆ ನಿರ್ಮಿಸಲು ಅನುದಾನವನ್ನು ಮಂಜೂರು ಮಾಡಬೇಕು, ಇಲ್ಲವಾದಲ್ಲಿ ಕುಟುಂಬ ಸಮೇತರಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾದಿತು ಎಂದು ಗಣೇಶ್ ಶೇಖಪ್ಪ ಚಲವಾದಿ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದು, ಪ್ರತಿಭಟನೆ ಕೈಗೊಳ್ಳುವ ಮುನ್ನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.