ವಿಶೇಷ ಲೇಖನ: ಅದು ಮಧ್ಯಮವರ್ಗದ ಮನೆ. ಅಲ್ಲಿ ಶಾಲೆಗೆ ಹೋಗುವ ಇಬ್ಬರು ಅವಳಿ ಮಕ್ಕಳು. ಒಬ್ಬ ಲವ್ ಮತ್ತೊಬ್ಬ ಖುಶ್. ಆ ಮನೆಯಲ್ಲಿ ಟಿವಿ ಇರಲಿಲ್ಲ. ಆದರೆ ಮಕ್ಕಳಿಗೆ ಟಿವಿ ನೋಡುವ ಹುಚ್ಚು. ಓದುವ ಮಕ್ಕಳು ಟಿವಿ ನೋಡುತ್ತಾ ಕಾಲ ಹರಣ ಮಾಡಬಾರದೆಂದು ಅಪ್ಪ ಅಮ್ಮ ಗದರುತ್ತಿದ್ದರು. ಆದರೆ ಭಾನುವಾರ ಮಾತ್ರ ಪಕ್ಕದ ಮನೆಯ ನಿಶಾ ದೀದಿಯ ಮನೆಗೆ ಟಿವಿ ನೋಡಲು ಹೋಗಲು ಮಾತ್ರ ಅನುಮತಿ ಇತ್ತು. ಮಕ್ಕಳು ಪ್ರತೀ ಭಾನುವಾರ ಹವಾಯಿ ಚಪ್ಪಲಿ ಧರಿಸಿ ನಿಶಾ ದೀದಿ ಮನೆಗೆ ಟಿವಿ ನೋಡಲು ಹೋಗುತ್ತಿದ್ದರು. ಮಕ್ಕಳು ಪ್ರತಿ ಭಾನುವಾರ ಬೆಳಿಗ್ಗೆ 10 ಆಗುವುದನ್ನೇ ಕಾಯುತ್ತಿದ್ದರು. ಏಕೆಂದರೆ ದೂರದರ್ಶನದಲ್ಲಿ ಬೆಳಗ್ಗೆ 10 ಕ್ಕೆ “ಪರಮವೀರ ಚಕ್ರ” ಧಾರಾವಾಹಿ ಪ್ರಸಾರವಾಗುತ್ತಿತ್ತು. ಸೈನಿಕರ ಪರಮವೀರತೆಯ ಕಥೆಗಳನ್ನು ಆ ಮಕ್ಕಳು ತನ್ಮಯತೆಯಿಂದ ನೋಡುತ್ತಿದ್ದರು. ಮನೆಗೆ ಬಂದು ಕಥೆ ಹೇಳುತ್ತಿದ್ದರು. ಆಗ ಆ ಅಪ್ಪ ಅಮ್ಮಂದಿರಿಗೇನು ಗೊತ್ತಿತ್ತು ಮುಂದೆ ನಮ್ಮ ಮಗನಿಗೂ ಆ ಗೌರವ ಸಿಗುತ್ತದೆಂದು? ಹೌದು, ಇಪ್ಪತ್ತು ವರ್ಷಗಳ ನಂತರ ಸೋದರರಲ್ಲೊಬ್ಬನಾದ ಲವ್ ಗೆ ಪರಮವೀರತೆಗೆ ಸಿಕ್ಕುವ ಅತ್ಯುಚ್ಛ ಗೌರವ “ಪರಮವೀರ ಚಕ್ರ” ಪ್ರಾಪ್ತವಾಯಿತು. #ಉತ್ತಿಷ್ಠಭಾರತ ಆ ಲವ್ ನನ್ನು ಮುಂದೆ ದೇಶ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಎಂದು ಹೆಮ್ಮೆಯಿಂದ ಕರೆಯಿತು. 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ನ ಯೋಧ ಕ್ಯಾ.ವಿಕ್ರಮ್ ಭಾತ್ರಾ ಕಾರ್ಗಿಲ್ ಯುದ್ಧದ ಹೀರೋ ಆದ.
© ಜುಲೈ 7th 1999,ಕುಳಿರ್ಗಾಳಿ ಮೊನಚಾದ ಕತ್ತಿಯಂತೆ ದೇಹವನ್ನು ಚುಚ್ಚುತ್ತಿತ್ತು. ವಿಕ್ರಮ್ ಭಾತ್ರಾನ ಹಿಂದೆ 25ಜನರ ಕಂಪನಿ ಇತ್ತು. ಆ ಕಂಪನಿಯ ಗುರಿ ಪಾಯಿಂಟ್ 4875 ಆಗಿತ್ತು. ಆದರೆ ಶತ್ರುಗಳು ಕೇವಲ 70ಮೀ ದೂರದಲ್ಲಿದ್ದರು. ಲೆ. ಕ್. ಜೋಷಿ ಜುಲೈ 7ರ ಮುಂಜಾನೆ 5.30 ಹೊತ್ತಿಗೆ ಗುರಿಯನ್ನು ಮುಟ್ಟಲು ಆದೇಶ ನೀಡಿದರು. ಶತ್ರುಗಳಿಗೆ ಸಮೀಪ ಮತ್ತು ಗುರಿ ಶತ್ರುಗಳಿಗೆ ನೇರಾ ನೇರಾ ಇತ್ತು. ಶತ್ರುಗಳೊಂದಿಗೆ ಮುಖಾಮುಖಿಯಾಗದೆ ಗುರಿ ಮುಟ್ಟುವಂತಿಲ್ಲ. ವಿಕ್ರಮ್ ಭಾತ್ರಾ ತನ್ನ ಸುರಕ್ಷತೆಯನ್ನು ಲೆಕ್ಕಿಸದೆ ಮುಂದುವರೆದ. ಶತ್ರು ಪಾಳಯದಿಂದ ಗುಂಡುಗಳು ಹಾರಿಬಂದರೂ ಕೈಯಲ್ಲಿದ್ದ ಎ.ಕೆ 47 ಅಬ್ಬರಿಸುತ್ತಲೇ ಇತ್ತು. ವಿಕ್ರಮ್ ಭಾತ್ರಾರ ಪ್ರಾಣ ಬಿಡುವ ಮುನ್ನ ಶತ್ರು ಪಾಳಯವನ್ನು ನಾಶ ಮಾಡಿದ್ದರು. ಕ್ಯಾ. ವಿಕ್ರಮ್ ಭಾತ್ರಾರ ಯುದ್ಧ ಘೋಷಣೆ ” ಏ ದಿಲ್ ಮಾಂಗೇ ಮೋರ್’ ಕಾರ್ಗಿಲ್ ಯುದ್ಧದ ಸಮಯದಿಂದ ಇಂದಿನವರೆಗೂ ಕೋಟ್ಯಂತರ ದೇಶಪ್ರೇಮಿಗಳ ಘೋಷಣೆಯಾಗಿ ಉಳಿದಿದೆ.
© ರಕ್ತದ ಮಡುವಲ್ಲಿ ಬಿದ್ದಿದ್ದ ಭಾತ್ರಾನ ಬಳಿಗೆ ಬಂದ ಸುಭೇದಾರ್ ರಘುನಾಥ್ ಸಿಂಗ್ ಅವರ ಕೊನೆಯ ಕ್ಷಣಗಳನ್ನು ಬಣ್ಣಿಸಿದ್ದು ಹೀಗೆ” ಅವರು ರಕ್ತದ ಮಡುವಲ್ಲಿ ಬಿದ್ದಿದ್ದರು. ಕೈಯಲ್ಲಿದ್ದ ಎಕೆ47 ಅನ್ನು ಗಟ್ಟಿಯಾಗಿ ಹಿಡಿದಿದ್ದರು. ನಾವು ಅವರನ್ನು ಸಂಪೂರ್ಣ ಖಾಲಿ ಮಾಡಿಸೋಣ ಎಂದು ಅವರು ಆ ಸ್ಥಿತಿಯಲ್ಲೂ ಗರ್ಜಿಸಿದಂತೆ ಹೇಳಿದರು”
ಆಗ ಭಾತ್ರಾರ ವಯಸ್ಸು ಕೇವಲ 24. ಇಂದಿಗೆ ಅವರ ಬಲಿದಾನವಾಗಿ 17 ವರ್ಷ. ವಿಕ್ರಮ್ ಭಾತ್ರಾರನ್ನು ಶೇರ್ ಷಾ ಎಂದು ಕರೆಯುತ್ತಿದ್ದರು. ಶೇರ್ ಷಾ ನನ್ನು ಎಂದೆಂದಿಗೂ ಮರೆಯದೆ ನೆನೆಯೋಣ.