ದಾಂಡೇಲಿ: ನಗರದ ಸಮೀಪದಲ್ಲಿರುವ ಮತ್ತು ಜೊಯಿಡಾ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರಧಾನಿ ಗ್ರಾಮ ಪಂಚಾಯ್ತಿಯ ಜನತಾ ಕಾಲೋನಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಶಾಲೆಗೆ ಆತಂಕಕಾರಿಯಾಗಿದ್ದ ಕೆಲವು ಮರಗಳನ್ನು ಮತ್ತು ಕೆಲವು ಮರದ ಟೊಂಗೆಗಳನ್ನು ತೆರವುಗೊಳಿಸುವ ಕಾರ್ಯವನ್ನು ವಿರ್ನೋಲಿ ಅರಣ್ಯ ವಲಯದ ವತಿಯಿಂದ ಹೆಸ್ಕಾಂ ಸಹಕಾರದೊಂದಿಗೆ ಮಾಡಲಾಯಿತು.
ಶಾಲೆಯ ಮುಖ್ಯೋಪಾಧ್ಯಯರ ಮತ್ತು ಶಾಲಾಭಿವೃದ್ಧಿ ಸಮಿತಿಯ ಮನವಿಗೆ ತಡವರಿಯದೇ ವಿರ್ನೋಲಿ ವಲಯದ ವಲಯಾರಣ್ಯಾಧಿಕಾರಿ ಸಂಗಮೇಶ್ ಪಾಟೀಲ್ ಅವರು ಸ್ಪಂದಿಸಿ ಉಪ ವಲಯಾರಣ್ಯಾಧಿಕಾರಿ ನಾಗರಾಜ್ ಅವರನ್ನು ಹಾಗೂ ಅರಣ್ಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ, ಆತಂಕಕಾರಿ ಸ್ವರೂಪದಲ್ಲಿರುವ ಆಯ್ದ ಮರಗಳನ್ನು ಮತ್ತು ಮರಗಳ ಟೊಂಗೆಗಳನ್ನು ತೆರವುಗೊಳಿಸುವ ಕರ‍್ಯವನ್ನು ಪ್ರಾರಂಭಿಸಲಾಯ್ತು. ತೆರವು ಕರ‍್ಯಚರಣೆಯ ಮುಂಚೆ ಹೆಸ್ಕಾಂಗೆ ಮಾಹಿತಿಯನ್ನು ನೀಡಿ, ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಿ, ಹೆಸ್ಕಾಂ ಸಿಬ್ಬಂದಿಗಳ ಉಪಸ್ಥಿತಿಯೊಂದಿಗೆ ತೆರವು ಕಾರ್ಯವನ್ನು ನಡೆಸಲಾಯಿತು.ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೆ ಎಚ್ಚೆತ್ತು ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆಗೆ ಮತ್ತು ಸಹಕರಿಸಿದ ಹೆಸ್ಕಾಂ ಇಲಾಖೆಗೆ ಶಾಲಾ ಮುಖ್ಯೋಪಾಧ್ಯಯಿನಿ ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯವರು ಮತ್ತು ಸ್ಥಳೀಯ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.