ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಗೆ ಸಂಬಂಧಿಸಿ ಉಪವಿಭಾಗಾಧಿಕಾರಿ ಮತ್ತು ಅಧ್ಯಕ್ಷರು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಸಾಗರ ಅವರೊಂದಿಗೆ ಜು.3, ಸೋಮವಾರ ಮುಂಜಾನೆ 11 ಗಂಟೆಗೆ ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಗಳಿಗೆ ಉಂಟಾದ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಗರ ತಾಲೂಕಿನಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ ಅರ್ಜಿ ಕಾನೂನು ಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತಿರಸ್ಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದಲ್ಲದೇ, ಅದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರೊಂದಿಗೆ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಅರ್ಜಿಗಳನ್ನು ತಿರಸ್ಕರಿಸಿರುವುದರಿಂದ ಚರ್ಚಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗ ; ಶೇ. 22.57 ರಷ್ಟು ತಿರಸ್ಕಾರ
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ವಿವಿಧ ಗ್ರಾಮ ಅರಣ್ಯ ಹಕ್ಕು ಸಮಿತಿಗಳಲ್ಲಿ ಬುಡಕಟ್ಟು- 4,577, ಪಾರಂಪರಿಕ- 90,854 ಹಾಗೂ ಸಮೂಹ ಉದ್ದೇಶಕ್ಕಾಗಿ-1,644 ಹೀಗೆ ಒಟ್ಟೂ 97,075 ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು ಇರುತ್ತದೆ. ಅವುಗಳಲ್ಲಿ ಬುಡಕಟ್ಟು 1,970, ಪಾರಂಪರಿಕ 439, ಸಮೂಹ ಉದ್ದೇಶಕ್ಕೆ 35 ಹೀಗೆ ಒಟ್ಟು 2,444 ಅರ್ಜಿಗಳಿಗೆ ಮಾನ್ಯತೆ ಸಿಕ್ಕಿರುವುದಾಗಿ ಹಾಗೂ ಒಟ್ಟೂ 21,916 ಅರ್ಜಿಗಳು(ಶೇ. 22.57) ತೀರಸ್ಕಾರವಾಗಿರುವ ಅಂಕೆ-ಸಂಖ್ಯೆ 2021 ರ ಮೇ ಪ್ರಕಾರ ತಿಳಿದು ಬರುತ್ತದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.