ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಈ ಗ್ಯಾಸ್ ಟ್ಯಾಂಕರ್ ಮಹಾರಾಷ್ಟ್ರದ ರತ್ನಗಿರಿಯಿಂದ ಮಂಗಳೂರಿನ ಪುತ್ತೂರಿಗೆ ತೆರಳುತ್ತಿತ್ತು. ಮಂಗಳವಾರ ರಾತ್ರಿ 8 ಗಂಟೆಯ ಸುಮಾರು ಟ್ಯಾಂಕರ್ ಉರುಳಿ ಬಿದ್ದಿದೆ. ಉರುಳಿ ಬಿದ್ದ ಟ್ಯಾಂಕರ್ ನಿಂದ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಇಂಡಾನೆ ಕಂಪನಿಯ ತಂತ್ರಜ್ಞರು ಸೋರಿಕೆಯಾಗುತ್ತಿದ್ದ ಗ್ಯಾಸ್‌ನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾತ್ರಿ 8.30 ರಿಂದ 11 ಗಂಟೆಯವರೆಗೆ ಗ್ಯಾಸ್ ಟ್ಯಾಂಕರ್ ಮುರಳಿ ಬಿದ್ದ ಸ್ಥಳದಿಂದ ಬಹಳಷ್ಟು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಯಲ್ಲಾಪುರದಿಂದ ಅಂಕೋಲಾ ಕಡೆಗೆ ತೆರಳುವ ಲಘು ವಾಹನಗಳಿಗೆ ಶಿರಸಿ ಕುಮಟಾ ರಸ್ತೆಯ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಿಕೊಡಲಾಗಿತ್ತು.
ಅಪಘಾತದಲ್ಲಿ ಟ್ಯಾಂಕರ್ ಚಾಲಕನ ಕೈಗೆ ಪೆಟ್ಟಾಗಿದ್ದು, ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎದುರಿನಿಂದ ಬರುತ್ತಿದ್ದ ಅಪಘಾತಕ್ಕೆ ಈಡಾದ ಕಲ್ಲಂಗಡಿ ಸಾಗಿಸುತ್ತಿದ್ದ ಲಾರಿ ಚಾಲಕ ಕ್ಲೀನರ್ ಗೆ ಕೂಡ ಚಿಕ್ಕ ಪುಟ್ಟ ಗಾಯಗಳಾಗಿದೆ.
ಪೊಲೀಸ್ ನಿರೀಕ್ಷಕರಾದ ರಂಗನಾಥ್, ಇನ್ನಿತರ ಅಧಿಕಾರಿಗಳು ಟ್ಯಾಂಕರ್ ಉರಳಿ ಬಿದ್ದ ಸ್ಥಳದಲ್ಲಿಯೇ ಇದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.