ಮರ್ಯಾದಾ ಪುರುಷೋತ್ತಮ ರಾಮನೆಂದರೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಅಗಾಧವಾದ ಭಕ್ತಿ ಮತ್ತು ಪ್ರೇಮವಿದೆ. ಶ್ರೀರಾಮ ಹೀಗೆ ಇರುತ್ತಾನೆ ಎಂಬ ಒಂದು ಸ್ಪಷ್ಟವಾದ ಕಲ್ಪನೆ ನಮ್ಮ ಮನಸ್ಸಿನಲ್ಲಿ ಇದೆ. ಆ ಕಲ್ಪನೆಯನ್ನು ನಾವು ಆರಾಧಿಸುತ್ತೇವೆ ಮತ್ತು ಪೂಜಿಸುತ್ತೇವೆ. ಶ್ರೀ ರಾಮನ ಬಗ್ಗೆ ನಮಗೆ ಐತಿಹಾಸಿಕ ಪುಸ್ತಕಗಳಲ್ಲಿ, ಕುರುಹುಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ನಮ್ಮ ಈ ಕಲ್ಪನೆಯೊಂದಿಗೆ ಬಲಿಷ್ಠವಾಗಿ ಬೆಸೆದುಕೊಂಡಿದೆ. ಭಾರತದಲ್ಲಿ ಇದುವರೆಗೆ ಕಾಣಿಸಿಕೊಂಡಿರುವ ಎಲ್ಲಾ ಶ್ರೀರಾಮನಿಗೆ ಸಂಬಂಧಿಸಿದ ಚಿತ್ರಗಳಲ್ಲೂ ಸಮಾನತೆ ಇದೆ ಮತ್ತು ಈ ಚಿತ್ರಗಳು ನಮ್ಮಲ್ಲಿ ಶ್ರೀರಾಮನ ಬಗ್ಗೆ ಆದರದ ಭಾವವನ್ನು ಮೂಡಿಸುತ್ತದೆ. ಇದೇ ಕಾರಣಕ್ಕಾಗಿ ನಾವು ಶ್ರೀರಾಮನನ್ನು ಬೇರೆ ರೂಪದಲ್ಲಿ ಊಹಿಸಲು ಸಾಧ್ಯವಾಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಶ್ರೀರಾಮನನ್ನು ಅವರವರ ಮನಸ್ಸಿಗೆ ತೋಚಿದಂತೆ ಗೀಚಿ ಅದಕ್ಕೆ ಸೃಜನಶೀಲತೆಯ ಟ್ಯಾಗ್‌ಲೈನ್ ನೀಡಲಾಗುತ್ತಿರುವುದು ವಿಪರ್ಯಾಸವೇ ಸರಿ.
ಶ್ರೀರಾಮ ನಮಗೆ ಕೇವಲ ಆರಾಧ್ಯ ದೇವರು ಮಾತ್ರವಲ್ಲ ಒಬ್ಬ ಆದರ್ಶ ಪುರುಷ ಕೂಡ ಹೌದು. ತಮಗೆ ಬೇಕಾದಂತೆ ಚಿತ್ರಿಸಲು ರಾಮಾಯಣ ಒಂದು ಕಾಲ್ಪನಿಕ ಪುಸ್ತಕವೂ ಅಲ್ಲ. ನಮ್ಮ ಐತಿಹಾಸಿಕ ಘಟನೆಗಳ ಒಂದು ಪುಸ್ತಕವಾಗಿದೆ. ಆದರೂ ಕೆಲವರು ರಾಮನಿಗೆ ಸಂಬಂಧಿಸಿದಂತೆ ಕಪೋಲಕಲ್ಪಿತ ಚಿತ್ರಗಳನ್ನು ಚಿತ್ರಿಸಲು ಹೊರಟಿದ್ದಾರೆ. ಮೊದಲು ಶ್ರೀ ರಾಮನ ಬಗ್ಗೆ ಎಐ ಚಿತ್ರವನ್ನು ತರಲಾಯಿತು. ನಮ್ಮ ಕಲ್ಪನೆಯ ರಾಮನಿಗೂ ಆ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಅದರ ಬಗ್ಗೆ ಸಹಿಷ್ಣುಗಳಾದ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿಲ್ಲ. ಆದರೀಗ ತೆರೆಗೆ ಅಪ್ಪಳಿಸಿರುವ ಆದಿಪುರುಷ ಸಿನಿಮಾ ರಾಮಾಯಣವನ್ನು ಸಂಪೂರ್ಣ ರೀತಿಯಲ್ಲಿ ಒಂದು ಕಾಲ್ಪನಿಕ ಕಥೆಯಾಗಿ ಕಟ್ಟಿ ಕೊಡುವ ಪ್ರಯತ್ನವನ್ನು ನಡೆಸಿದೆ. ಇಲ್ಲಿ ರಾಮ, ಆಂಜನೇಯ, ಸೀತೆ ಕೂಡ ಒಂದು ಕಾಲ್ಪನಿಕ ಪಾತ್ರಗಳಾಗಿ ಕಾಣಸಿಗುತ್ತಾರೆಯೇ ಹೊರತು ನಮ್ಮ ಆರಾಧ್ಯರಾಗಿ ಕಾಣಿಸಿಕೊಂಡಿಲ್ಲ.
ಇಂದು ಕ್ರಿಯೇಟಿವ್ ಫ್ರೀಡಂ ಹೆಸರಿನಲ್ಲಿ ಇತಿಹಾಸದೊಂದಿಗೂ ಆಟವಾಡಲಾಗುತ್ತಿದೆ. ಕಲಾ ಸ್ವಾತಂತ್ರ್ಯದ ಹೆಸರಲ್ಲಿ ನಮ್ಮ ಆರಾಧ್ಯ ದೇವರನ್ನು ಮತ್ತು ಆದರ್ಶ ಪುರುಷರನ್ನು ಕಾಲ್ಪನಿಕ ರೂಪದಲ್ಲಿ ನಮ್ಮ ಮುಂದೆ ತರಲಾಗುತ್ತಿದೆ. ಇದು ಇತಿಹಾಸಕ್ಕೆ ಮಾಡಲಾಗುತ್ತಿರುವ ಘೋರ ಅನ್ಯಾಯ ಮಾತ್ರವಲ್ಲ, ನಮ್ಮ ಧಾರ್ಮಿಕ ಭಾವನೆಗಳ ಮತ್ತು ನಮ್ಮ ಆರಾಧ್ಯರ ಅಪಹಾಸ್ಯವೂ ಆಗಿದೆ.
ರಾಮಾಯಣದಲ್ಲಿನ ವ್ಯಕ್ತಿಗಳು ಹೀಗೆಯೇ ಇದ್ದರು ಎಂದು ಯಾರು ನೋಡಿದ್ದಾರೆ?, ಕಾಳಿದಾಸ ವರ್ಣನೆಯ ರಾಮನಿಗೂ ಮತ್ತು ವಾಲ್ಮೀಕಿ ರಾಮಾಯಣದಲ್ಲಿನ ರಾಮನಿಗೂ ವ್ಯತ್ಯಾಸವಿದೆಯಲ್ಲವೇ? ಹೀಗಿರುವಾಗ ಆದಿಪುರುಷ ಚಿತ್ರದಲ್ಲಿ ಶ್ರೀರಾಮನನ್ನು ಬೇರೆ ರೀತಿಯಲ್ಲಿ ಪ್ರತಿಬಿಂಬಿಸಿದ್ದರಲ್ಲಿ ತಪ್ಪೇನಿದೆ ಎಂದು ಕೆಲವರು ಕೇಳುತ್ತಿದ್ದಾರೆ. ಹೌದು ರಾಮ ಹೀಗೆಯೇ ಇದ್ದ ಎಂದು ಯಾರೂ ನೋಡಿಲ್ಲ, ಹಾಗೆಯೇ ರಾಮನನ್ನು ಮಹಾನ್ ವ್ಯಕ್ತಿಗಳು ಬೇರೆ ಬೇರೆ ರೀತಿಯಲ್ಲಿ ಚಿತ್ರಿಸಿದ್ದಾರೆ, ಬಿಂಬಿಸಿದ್ದಾರೆ ಎಂಬುದು ಕೂಡ ನಿಜ. ಆದರೆ ಇತಿಹಾಸದಲ್ಲಿ ರಾಮಾಯಣವನ್ನು ಬರೆದವರು ಅಥವಾ ರಾಮನ ಬಗೆಗೆ ಸಾಹಿತ್ಯಗಳನ್ನು ರಚಿಸಿದವರು ರಾಮನನ್ನು ಬೇರೆ ಬೇರೆ ರೀತಿಯಲ್ಲಿ ಕಲ್ಪಿಸಿರಬಹುದು ಆದರೆ ಅದರಲ್ಲಿ ರಾಮನ ಬಗ್ಗೆ ಆರಾಧ್ಯ ಭಾವ, ಪೂಜನೀಯ ಭಾವವಿತ್ತು. ರಾಮನ ಬಗೆಗೆ ಅವರಿಗಿರುವ ಭಕ್ತಿ, ಗೌರವವನ್ನು ಅದು ತೋರಿಸುತ್ತಿತ್ತು. ಅವರ ಸೃಜನಶೀಲತೆಯಲ್ಲಿ ಮೂಡಿ ಬಂದ ರಾಮ ಗೌರವವಾನ್ವಿತನಾಗಿಯೇ ಕಂಗೊಳಿಸುತ್ತಿದ್ದ, ಆತನ ವ್ಯಕ್ತಿತ್ವಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಆದರೆ ಆದಿಪುರುಷ ಸಿನಿಮಾದಲ್ಲಿ ರಾಮನ ಬಗ್ಗೆ ಪೂಜನೀಯ ಭಾವ ಕಂಡು ಬರುತ್ತಿಲ್ಲ. ಯಾವ ರಾಮಾಯಣವನ್ನು ತೆಗೆದುಕೊಂಡು ಈ ಸಿನಿಮಾ ಮಾಡಲಾಗಿದೆ ಎಂಬುದು ಅರ್ಥ ಆಗುತ್ತಿಲ್ಲ. ಅದರಲ್ಲಿನ ಸಂಭಾಷಣೆಗಳಿಗೆ ಮೂಲ ಯಾವುದು ಎಂಬುದೂ ತಿಳಿಯುತ್ತಿಲ್ಲ. ಆಂಜನೇಯನ ಸಂಭಾಷಣೆಗಳು ಕೀಳು ಅಭಿರುಚಿಯನ್ನು ಹೊಂದಿದೆ. ಭಕ್ತರ ಆರಾಧ್ಯಮೂರ್ತಿ ಆಂಜನೇಯ ಎಂದಿಗೂ ಅಂತಹ ಭಾಷೆಗಳನ್ನು ಬಳಸುವುದನ್ನು ಊಹಿಸಲೂ ಅಸಾಧ್ಯ. ಇಡೀ ಸಿನಿಮಾದುದ್ದಕ್ಕೂ ಇಂತಹ ವಿಚಿತ್ರ ಸಂಭಾಷಣೆಗಳನ್ನು ಕೇಳಬಹುದು. ಇವು ನೈಜ ರಾಮಾಯಣದ ಘನತೆಗೆ ಧಕ್ಕೆ ತಂದಿದೆ, ಮೇಲಾಗಿ ರಾಮನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ.
ರಾಮಾಯಣ ತಿಳಿದವರು ಆದಿಪುರುಷ್ ಸಿನಿಮಾ ನೋಡಿದರೆ ಬೈದುಕೊಂಡು ಹೊರಹೋಗಿ ಬೇರೆಯವರಿಗೆ ಸಿನಿಮಾ ನೋಡಬೇಡಿ ಎನ್ನಬಹುದು. ಆದರೆ ನಾವಿಲ್ಲಿ ಯೋಚಿಸಬೇಕಾಗಿದ್ದು ರಾಮಾಯಣದ ಬಗ್ಗೆ ಏನು ಅರಿಯದವರು ಈ ಸಿನಿಮಾ ನೋಡಿದರೆ ಏನು ಗತಿ ಎಂದು. ನಮ್ಮ ಸಿನಿಮಾಗಳು ಇಂದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ರಾಮಾಯಣವನ್ನು ತಿಳಿಯದ ವಿದೇಶಿ ವ್ಯಕ್ತಿ ಒಬ್ಬ ಆದಿಪುರುಷ್ ಸಿನಿಮಾವನ್ನು ನೋಡಿ ಇದುವೇ ನಿಜವಾದ ರಾಮಾಯಣ ಎಂದು ಭಾವಿಸಿದರೆ ಅದು ನಿಜಕ್ಕೂ ಭಾರತದ ಇತಿಹಾಸಕ್ಕೆ ಆಗುವ ದೊಡ್ಡ ಅನ್ಯಾಯ ಎಂದೆ ಭಾವಿಸಬೇಕಾಗುತ್ತದೆ. ಈ ಸಿನಿಮಾದ ಮೂಲಕ ರಾಮಾಯಣವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೊರಟರೆ ಅದು ರಾಮಾಯಣಕ್ಕೊಂದು ಕಳಂಕವೇ ಆಗಬಹುದು. ಅದರಲ್ಲೂ ಮುಂಬರುವ ಪೀಳಿಗೆ ಕೂಡ ಶ್ರೀರಾಮನನ್ನು, ಆಂಜನೇಯನನ್ನು ಒಂದು ಕಾಮಿಡಿ ಫಿಗರ್ ಥರ ನೋಡುವ ಅಪಾಯವಿದೆ. ಅದಕ್ಕೆ ಆಸ್ಪದ ನೀಡದಂತೆ ಪ್ರತಿಯೊಬ್ಬರೂ ಜಾಗರೂಕ ಮನಸ್ಥಿತಿಯನ್ನು ಹೊಂದಿರುವುದು ಅತ್ಯವಶ್ಯಕ.
ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳಿಂದ ಹಿಡಿದು ಇತ್ತೀಚಿನವರೆಗಿನ ಚಲನಚಿತ್ರಗಳವರೆಗೂ ಕೆಲವರು ಸೃಜನಶೀಲ ಸ್ವಾತಂತ್ರ್ಯ ಎಂಬ ಟ್ಯಾಗ್‌ಲೈನ್‌ನೊಂದಿಗೆ ದೇಶದ ಯುವಜನತೆಯನ್ನು ಬ್ರೈನ್‌ವಾಶ್ ಮಾಡಿ, ಭಾರತದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಸುತ್ತಿರುವ ಸನ್ನಿವೇಶಗಳನ್ನು ಕಾಣುತ್ತಿದ್ದೇವೆ. ಆದಿಪುರುಷ್ ಚಲನಚಿತ್ರವಂತೂ ನಿರ್ಮಾಣವೇ ಆಗದಿದ್ದಿದ್ದರೆ ಒಳ್ಳೆಯದಿತ್ತು ಎನ್ನುವಷ್ಟರ ಮಟ್ಟಿನ ಸ್ಥಿತಿಗೆ ತಲುಪಿದೆ. ಈ ಕುರಿತು Ved Science & Maths ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಈ ಕುರಿತು ವಿವರಿಸಿದ್ದಾರೆ ನೋಡಿ.