ಹುಬ್ಬಳ್ಳಿ: ಭಾರೀ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ.
ಚುನಾವಣೆಯಲ್ಲಿ 46 ಮತಗಳನ್ನು ಪಡೆಯುವ ಮೂಲಕ ಮೇಯರ್ ಆಗಿ ಬಿಜೆಪಿಯ ವೀಣಾ ಬಾರದ್ವಾಡ್ ಆಯ್ಕೆಯಾಗಿದ್ದರೆ, ಬಿಜೆಪಿಯ ಸತೀಶ್ ಹಾನಗಲ್ ಸಹ 46 ಮತಗಳನ್ನು ಪಡೆಯುವ ಮೂಲಕ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನು ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸುವರ್ಣ ಸ್ಪರ್ಧಿಸಿದ್ದು ಅವರ ಪರ 37 ಮತಗಳು ಮಾತ್ರ ಚಲಾವಣೆಗೊಂಡಿವೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿಯಿಂದ ವೀಣಾ ಬರದ್ವಾಡ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ನಿಂದ ಸುವರ್ಣ ಅವರು ನಾಮಪತ್ರ ಸಲ್ಲಿಸಿದ್ದರು.
“ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ನಮ್ಮ ಪಕ್ಷದ ವೀಣಾ ಬಾರದ್ವಾಡ ಹಾಗೂ ಉಪಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀ ಸತೀಶ ಹಾನಗಲ್ ರವರಿಗೆ ಹಾರ್ದಿಕ ಅಭಿನಂದನೆಗಳು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸತತ 12ನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಮಹಾಪೌರರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಯ ಹಿನ್ನೆಲೆಯಲ್ಲಿ ಅವಿರತವಾಗಿ ಶ್ರಮಿಸಿರುವ ಸಮಸ್ತ ಕಾರ್ಯಕರ್ತ ಬಂಧುಗಳಿಗೆ ಹಾಗೂ ಪ್ರಮುಖರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಬಿಜೆಪಿ ಹೇಳಿದೆ.