ಶಿರಸಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಗುರಿಯಾಗಿದ್ದು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ ಸಂಘದ ಸದಸ್ಯರೊಂದಿಗೆ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರೆಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿರುವುದು ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಮಹಿಳಾ ಪ್ರಯಾಣಿಕರು ಆಟೋ ಚಾಲಕರಿಗೆ ಆಧಾರವಾಗಿದ್ದಾರೆ. ಆದರೆ, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯಿಂದ ಆಟೋ ಚಾಲಕರಿಗೆ ಕೆಲಸವಿಲ್ಲದಂತಾಗುತ್ತಿದೆ. ಇದರಿಂದ ಆಟೋ ಚಾಲಕರ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಉಚಿತ ಬಸ್‌ಗೆ ಅವಕಾಶ ನೀಡಬಾರದು ಎಂದರು.
ಆಟೋ ರಿಕ್ಷಾ ಚಾಲಕರಿಗೆ ಪ್ರತಿ ತಿಂಗಳು 5 ಸಾವಿರ ನೀಡಬೇಕು. ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣ ಉಚಿತವಾಗಿ ನೀಡಬೇಕು. ಚಾಲಕರು ಅಪಘಾತದಲ್ಲಿ ಸಾವನ್ನಪ್ಪಿದರೆ 5 ಲಕ್ಷ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಆಟೋ ಚಾಲಕರ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಆಟೋ ರಿಕ್ಷಾ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಈಶ್ವರ್ ಆಚಾರಿ, ಸಲೀಂ ಅಹ್ಮದ್, ಕೃಷ್ಣ ನಾಯ್ಕ, ನರಸಿಂಹ ನಾಯ್ಕ, ಕ್ಸೇವಿಯರ್ ಹಾಗೂ ಸಂಘದ ಸದಸ್ಯರು ಇದ್ದರು.