ಯಲ್ಲಾಪುರ: ಒಂದೆಡೆ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ,ಇನ್ನೊಂದೆಡೆ ಶಾಲೆಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಸ್ಸೇರಲಾಗದೇ ಅತ್ತ ಶಾಲೆಗೂ ಹೋಗಲಾಗದ ಹೋದರೂ ಸಕಾಲಕ್ಕೆ ವಾಪಸ್ಸು ಬರಲಾಗದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಬೆಳಿಗ್ಗೆ ಸರಿಯಾದ ವೇಳೆಗೆ ಬಸ್ ನಿಲುಗಡೆ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದರೂ ಬಸ್ ತುಂಬಿದೆ ಎಂದು ನಿಲ್ಲಿಸದೇ ಹೋಗೋದು,ಕಾದು ಕಾದು ಅಂತೂ ಶಾಲೆ ಸೇರಿ ಮುಗಿಸಿ ವಾಪಸ್ಸಾಗುವಾಗ ರಾತ್ರಿಯಾಗುವ ತನಕ ಬಸ್ಸಿಗೆ ಕಾಯೋದು, ಏರಲಾಗದೇ ಒದ್ದಾಡುವುದು ಮಕ್ಕಳ ನಿತ್ಯದ ಕಾಯಕವಾಗಿಬಿಟ್ಟಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಿರವತ್ತಿಯಲ್ಲಿ ಶಾಲಾ ಮಕ್ಕಳ ಪರಿಸ್ಥಿತಿ ಯಾರಿಗೂ ಬೇಡ.ಬಸ್ಸು ನಿಲ್ಲಿಸುತ್ತಾನೆಂದು ಬಸ್ ಬಂದ ಕೂಡಲೇ ಓಡೋದು ಚಾಲಕ ನಿಲ್ಲಿಸದೇ ಹೋಗುವುದು,ಅಥವಾ ಹತ್ತಿದರೂ ಅಣ್ಣ ಹತ್ತುವುದು, ತಂಗಿ ಅಲ್ಲೇ ಹತ್ತಲಾಗದೇ ಉಳಿಯುವುದು,ಓಡುವ ರಭಸಕ್ಕೆ ಕಾಲು ಎಡವಿ ಬೀಳುವುದು,ನೂಕಾಟ, ತಳ್ಳಾಟ. ಒಟ್ಟಿನಲ್ಲಿ ಬಸ್ಸಿಗೆ ಹೋಗುವ ಮಕ್ಕಳು ಸಂಕಟದಲ್ಲಿ ಸಿಲುಕಿದ್ದಾರೆ.
ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ ಬೀಳಲಿದೆ.ಮನೆಯಲ್ಲಿ ಪಾಲಕರು ಪೋಷಕರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಮಕ್ಕಳನ್ನು ಬಸ್ಸಿಗೆ ಕಳಿಸುವ ಶಾಲೆಗಳಿಗೆ ಸೇರಿಸಿಕೊಂಡು ಈಗ ಪಾಲಕರು ಚಿಂತಿತರಾಗಿದ್ದಾರೆ.ಅತ್ತ ಉಚಿತ ತಿರುಗುವ ಭಾಗ್ಯ ಕೊಟ್ಟು, ಇತ್ತ ಮಕ್ಕಳ ಶಿಕ್ಷಣ ಕಸಿದುಕೊಂಡಂತಾಗಿದೆ. ಇದಕ್ಕೊಂದು ಸೂಕ್ತ ಪರಿಹಾರದ ಅವಶ್ಯಕತೆಯಿದೆ.