ಕುಮಟಾ: ಪಟ್ಟಣದ ಹಳೇ ಹೆರವಟ್ಟಾದ ಶ್ರೀಸಾಣಿ ಅಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ನವಚಂಡಿ ಮಹಾಯಾಗ ಜೂ.9ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ವಿಜಯಾನಂದ ಗೋಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ಜೂ.6ರಿಂದಲೇ ಕಾರ್ಯಕ್ರಮ ಸಾಂಪ್ರದಾಯಿಕ ಆಚರಣೆಯಂತೆ ಸಾಂಗವಾಗಿ ಸಾಗಿದ್ದು, ದೇವತಾ ಪ್ರಾರ್ಥನೆಯಿಂದ ಆರಂಭವಾಗಿ ಗಣೇಶ ಶಾಂತಿ, ಅಗ್ನಿಗೃಹಣ, ಸುದರ್ಶನ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ, ರಾಕ್ಷೋಘ್ನ-ವಾಸ್ತು ವಿಧಾನಗಳು ನಡೆದಿವೆ. ಜೂ.8ರಂದು ಪುನರ್ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧಲೇಪನ, ಪೂರ್ಣ ಕಲಾವೃದ್ಧಿ ಹೋಮ, ಬ್ರಹ್ಮಕಲಶ ಆರಾಧನೆ, ಅಷ್ಟಾವಧಾನ ಮತ್ತು ಮಹಾ ಪೂಜೆ ನಡೆಯಲಿದೆ.
ಜೂ.9ರಂದು ಬ್ರಹ್ಮಕಲಶಾಭಿಷೇಕ, ಮಂಗಲ ಚಂಡಿಕಾಯಾಗ, ಮಹಾ ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು, ಮನ, ಧನದಿಂದ ಸಹಕಾರ ನೀಡುವಂತೆ ಮತ್ತು ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಸಾಣಿ ಅಮ್ಮ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪ್ರಭು, ಮುಖ್ಯ ಅರ್ಚಕ ಗುರು ಗುನಗಾ, ಪ್ರಮುಖರಾದ ಅಣ್ಣಯ್ಯ ಪೈ, ಭಗವಾನ್ ನಾಯ್ಕ, ದೇವಪ್ಪ ನಾಯ್ಕ, ಮಹಾದೇವ ಗೌಡ, ನಾಗಪ್ಪ ಗೌಡ, ನಾಗರತ್ನ ಶೇಟ್, ದೀಪಕ ಶೇಟ್, ಅನಂತ ನಾಯ್ಕ, ಗಜು ನಾಯ್ಕ, ಸತೀಶ ಶೇಟ್, ಗಜು ನಾಯ್ಕ, ಗೋಪಾಲ ನಾಯ್ಕ ಇತರರು ಇದ್ದರು.