ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ನೆಮ್ಮದಿ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ನಡೆದ ಪಾಶ್ಚಾತ್ಯ ದರ್ಶನ ಹಾಗೂ ಯಕ್ಷಗಾನ ಪ್ರದರ್ಶನ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಹಾಗೂ ‘ಬೆಳ್ಳಿ ಜಾರಿದ ಮೇಲೆ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಅತ್ತೀಮುರುಡು ವಿಶ್ವೇಶ್ವರ ಹೆಗಡೆಯವರ ‘ಬೆಳ್ಳಿ ಜಾರಿದ ಮೇಲೆ….’ ಕವನ ಸಂಕಲನವನ್ನು ಪತ್ರಕರ್ತ ಸಾಹಿತಿ, ಕವಿ ಅಶೋಕ ಹಾಸ್ಯಗಾರ ಲೋಕಾರ್ಪಣೆ ಮಾಡಿ ಮಾತನಾಡುತ್ತ, ಕಾವ್ಯವೆಂದರೆ ಎಲ್ಲ ಪ್ರಕಾರದ ಸಾಹಿತ್ಯ ಜನನಿ. ಹೊಸದಾಗಿ ಕವನ ರಚನೆ ಮಾಡುವವರು ವಿಶ್ವೇಶ್ವರ ಹೆಗಡೆಯವರ ಕಾವ್ಯವನ್ನು ಓದಬೇಕು. ಅವರ ಕಾವ್ಯ ನವೋದಯದಿಂದ ನವ್ಯದ ಕಡೆಗೆ ಸಾಗಿದೆ. ಕಾವ್ಯದಲ್ಲಿ ಗಟ್ಟಿತನವಿದೆ, ಸಂದೇಶವಿದೆ, ವಾಸ್ತವ ಜಗತ್ತಿನ ನಿರೂಪಣೆಯಿದೆ ಎಂದು ಮನೋಜ್ಞವಾಗಿ ನುಡಿದರು.
ಕೃತಿ ಪರಿಚಯವನ್ನು ಗಣಪತಿ ಭಟ್ಟರು ಮಾಡಿಕೊಡುತ್ತಾ, ನವೋದಯದ ನಾದಮಯತೆ ಈ ಕಾವ್ಯದಲ್ಲಿದೆ. ಇದು ಸಹೃದಯರ ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಇಲ್ಲಿರುವ 50 ಕವನಗಳಲ್ಲಿ ಒಂದಕ್ಕಿಂತ ಇನ್ನೊಂದು ವಿಶೇಷವಾಗಿದೆಯೆಂದು ಹೇಳಿ ಸಂಕಲನದ ರೊಕ್ಕ ಹಾರುತಿದೆ ನೋಡಿದಿರಾ ಕವನವನ್ನು ಪ್ರಸ್ತುತಪಡಿಸಿದರು.
ಕವಿ ಅತ್ತೀಮುರುಡು ವಿಶ್ವೇಶ್ವರ ಹೆಗಡೆ ತಮ್ಮ ಕೃತಿಯ ಕುರಿತು ಮಾತನಾಡುತ್ತಾ, ಕವಿ ಕಾವ್ಯವನ್ನು ಏತಕ್ಕಾಗಿ ಬರೆಯುತ್ತಾನೆ? ಎಂಬುದೇ ಒಂದು ಗಂಭೀರವಾದ ಪ್ರಶ್ನೆಯಾಗಿದೆ. ಪ್ರತಿಕ್ರಿಯೆಗಳ ಮೂಲಕವೇ ಕಾವ್ಯ ತನ್ನ ಸತ್ವವನ್ನು ಹೆಚ್ಚಿಸಿಕೊಳ್ಳುತ್ತದೆ. ಕಾವ್ಯವನ್ನು ಅನುಭವದ ಪರಿಧಿಯೊಳಗೆ ಬರೆಯಬೇಕು. ಸಂಶೋಧಿಸಬೇಕು. ಸ್ಪೂರ್ತಿಗಳ ವಿಚಾರಗಳು ಅನೇಕವಾದರೂ ಕಾವ್ಯ ರಸಮಯವಾಗುವುದಕ್ಕೆ ನಿಸರ್ಗ, ಪ್ರಕೃತಿ, ನದಿ, ನದಿಗಳ ವೈಭವ, ವೈವಿಧ್ಯತೆಗೆ ಕಾರಣವಾಗುತ್ತದೆ ಎಂದು ಮನಮುಟ್ಟುವಂತೆ ಮಾತನಾಡಿದರು.
ಜಗದೀಶ ಭಂಡಾರಿಯವರು ಒಂದು ಕವನವನ್ನು ಪ್ರಸ್ತುತ ಪಡಿಸಿದರು. ಪುಸ್ತಕ ಪ್ರಕಟಣೆಗೆ ಸಹಕರಿಸಿದ ಹರಿಗಾರಿನ ಜಿ.ವಿ.ಭಟ್ಟರನ್ನು ಸನ್ಮಾನಿಸಲಾಯಿತು. ಡಿ.ಎಂ.ಭಟ್ ಕುಳವೆ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಪದಕಿ ವಂದಿಸಿದರು. ಅಭಾಸಾಪದ ಜಿಲ್ಲಾ ಸಹ ಕಾರ್ಯದರ್ಶಿ ಸಾವಿತ್ರಿ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.