ಹೊನ್ನಾವರ: ಎಂ.ಪಿ.ಇ. ಸೊಸೈಟಿಯ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಿತು.
ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಕಾಂತಿ ಭಟ್ಟ ಈ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು. ಶಾಲಾ ರೀತಿ ನೀತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ನಂತರ ಸಿಹಿ ವಿತರಿಸಲಾಯಿತು. ಇದೇ ದಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಎಂ.ಪಿ.ಇ. ಸೊಸೈಟಿ ಕೇಂದ್ರೀಯ ವಿದ್ಯಾಲಯದ ಸಹಯೋಗದಲ್ಲಿ 3 ದಿನಗಳ ಬೇಸಿಗೆ ಶಿಬಿರ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳು ಸ್ಕೌಟ್ಸ್– ಗೈಡ್ಸ್ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಮುಖ್ಯ ಆಯುಕ್ತ ಡಾ.ಜಿ.ಜಿ.ಸಭಾಹಿತ ಮಾತನಾಡಿದರು.
ಪಠ್ಯಕ್ರಮದಜೊತೆಗೆ ಸ್ಕೌಟ್ಸ್- ಗೈಡ್ಸ್ನಲ್ಲಿ ರಾಜ್ಯ- ರಾಷ್ಟ್ರ ಪುರಸ್ಕಾರ ಪಡೆದು ಭವಿಷ್ಯದಲ್ಲಿ ಸ್ಪಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಮಾಡಿಕೊಳ್ಳಿ ಎಂದು ಕಾರ್ಯಕ್ರಮದ ಉದ್ಘಾಟಕರು ಮತ್ತು ಸಭಾಧ್ಯಕ್ಷ ಎಸ್.ಎಂ.ಭಟ್ಟರವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಎ.ಎಸ್.ಓ.ಸಿ ಕರಿಸಿದ್ದಪ್ಪ ಟಿ. ಉಪಸ್ಥಿತರಿದ್ದರು.
ನಮ್ಮ ವಿದ್ಯಾ ಸಂಸ್ಥೆಯ ವಿಧ್ಯಾರ್ಥಿಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಈ ವರ್ಷ ಕೂಡಾ ಆಸಕ್ತ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಕ್ಕೆ ಹೆಸರು ನೊಂದಾಯಿಸಿಕೊಳ್ಳಬಹುದೆಂದು ಪ್ರಾಚಾರ್ಯರಾದ ಕಾಂತಿ ಭಟ್ಟ ಮಾತನಾಡಿದರು. ಶಾಲೆಯ ಸ್ಕೌಟ್ಸ್ ಶಿಕ್ಷಕ ಪ್ರತಿನಿಧಿಯಾದ ಸುಜಯ್ ಭಟ್ಟ ಉಪಸ್ಥಿತರಿದ್ದರು. ಗೈಡ್ಸ್ ಶಿಕ್ಷಕಿ ವನಿತಾ ನಾಯ್ಕ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.