ಹೊನ್ನಾವರ: ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ನೀಡಿದ ಐದು ಗ್ಯಾರೆಂಟಿಯನ್ನೂ ಈಡೇರಿಸಲಿದೆ ಎಂದು ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಗುಣವಂತೆ ಒಕ್ಕಲಿಗರ ಸಭಾಭವನದಲ್ಲಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಈಗ ನಿಶ್ಚಿಂತೆಯಿಂದ ಒಬ್ಬ ಬಡವ ಮನೆ ಕಟ್ಟುತ್ತಾನೆ, ಒಬ್ಬ ಬಡ ವಿದ್ಯಾರ್ಥಿ ಅಮೇರಿಕಾದಲ್ಲಿ ಶಿಕ್ಷಣ ಮುಗಿಸಲು ಸಾಧ್ಯವಾಗುತ್ತದೆ. ಜನತೆ ಸುರಕ್ಷಿತವಾಗಿ, ಸಮರ್ಪಕವಾಗಿ ಏನು ಬೇಕಾದರು ಮಾಡಲು ಮಂಕಾಳ ವೈದ್ಯರಿಂದ ಸಾಧ್ಯ ಆಗುತ್ತದೆ ಎಂದು ನನ್ನಲ್ಲಿ ಶಕ್ತಿ ತುಂಬಿದ್ದಾರೆ. ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಬದುಕಿದ್ದಾಗ ಎಷ್ಟು ಜನರಿಗೆ ಸಹಾಯ ಮಾಡಬಹುದು ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಾಜಕಾರಣದಲ್ಲಿದ್ದವನು ನಾನು. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಕಾರ್ಯಕರ್ತರಿಗೆ, ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಂತವರು ರಾಜಕೀಯವಾಗಿ ಬೆಳೆಯುವುದು ಕಷ್ಟ ಎಂದರು.
ಕಾರ್ಯಕರ್ತರು ಚುನಾವಣೆಯಲ್ಲಿ ಶ್ರಮಿಸಿದ್ದಾರೆ. ಮಧ್ಯರಾತ್ರಿ ಸಮಯದಲ್ಲಿ ಸಹಾಯಹಸ್ತ ಕೇಳಿದರು ಖಂಡಿತವಾಗಿಯೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು. ಯಾರು ಸಹ ನಮ್ಮ ಅಧಿಕಾರವನ್ನು ದುರ್ಬಳಕೆ ಮಾಡಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ನನ್ನ ಅಧಿಕಾರ ಎನ್ನುವುದು ಬಡವರಿಗಾಗಿ, ಕಷ್ಟದಲ್ಲಿದ್ದವರಿಗಾಗಿ ಮೀಸಲಿಡುತ್ತೇನೆ. ಆದರೆ ಯಾರಿಗೂ ದರ್ಪ ತೋರಿಸಿದರೂ, ಯಾರಿಗೆ ತೊಂದರೆ ನೀಡಿದರೂ ಅದನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನನ್ನ ಅವಧಿಯಲ್ಲಿ ಸರ್ಕಾರ ನೀಡಲಾಗುವ ಸಂಬಳವನ್ನು ಈ ಹಿಂದೆಯೂ ಶಿಕ್ಷಣ ಹಾಗೂ ಬಡವರಿಗೆ ನೀಡಲಾಗಿದ್ದು, ಮುಂದೆಯೂ ಕೂಡ ಅದೇ ರೀತಿಯಲ್ಲಿ ನನ್ನ ಸಂಬಳ ಅವರಿಗಾಗಿಯೇ ಮಿಸಲಿಡುತ್ತೇನೆ ಎಂದರು.
ಕ್ಷೇತ್ರದ ಎಲ್ಲಾ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಗೆಲುವು ಆಗಬೇಕು ಎನ್ನುವ ಆಸೆ ಇದೆ. ಅದನ್ನು ನೀವೆಲ್ಲ ಒಗ್ಗಟ್ಟಿನಿಂದ ಸೇರಿದರೆ ಗೆಲುವು ನಮ್ಮದಾಗುತ್ತದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ, ಕರ್ನಾಟಕ ರಾಜ್ಯದ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾಗಿ ಆಯ್ಕೆಯಾಗಿರುದಕ್ಕೆ ಮಂಕಿ ಬ್ಲಾಕ್ ಹಾಗೂ ವಿವಿಧ ಪಂಚಾಯತಿ, ಕಾಂಗ್ರೇಸ್ ಪಕ್ಷದ ವಿವಿಧ ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ ಮಾತನಾಡಿ, ನಾನು ಈ ಭಾಗದಲ್ಲಿಈ ಹಿಂದೆ 2018ರಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸಂಶಿ ತೂಗು ಸೇತುವೆ ನಿರ್ಮಾಣ ಮಾಡುವಾಗ ಸಾಕಷ್ಟು ಸಹಕಾರ ಕೊಟ್ಟಿದ್ದರು. ಇಂದು ಅವರಿಗೆ ಇಡೀ ರಾಜ್ಯಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಹೈಕಮಾಂಡ್‌ನವರು ಮಂಕಾಳ ವೈದ್ಯರ ಮೇಲೆ ವಿಶ್ವಾಸ ಇಟ್ಟು ಈ ಸ್ಥಾನ ಕೊಟ್ಟಿದ್ದಾರೆ. ನಮಗೆಲ್ಲರಿಗೂ ಮುಂದೆ ಅಭಿವೃದ್ಧಿ ಆಗುತ್ತದೆ ಎನ್ನುವ ವಿಶ್ವಾಸ ಇದೆ. ಅವರು ನಮ್ಮೆಲ್ಲರ ಜೊತೆ ನಿಂತುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಕಾಳ ವೈದ್ಯ ಅವರು ತಮ್ಮ ಕ್ಷೇತ್ರದಲ್ಲಿ ಜನಪರವಾದ ಕೆಲಸಗಳನ್ನು, ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ ಕಣ್ಮಣಿಯಾಗಿದ್ದಾರೆ. ಯಾವ ಸೋಲಿಗೂ ಅಂಜದೇ ತಮ್ಮದೇ ಆದ ಕಾರ್ಯವೈಖರಿಯ ಮೂಲಕ ಮನೆಮಾತಾಗಿದ್ದಾರೆ. ಅವರ ಬೆನ್ನಿಗೆ ನಿಂತು ಶ್ರಮಿಸಿದ ಕಾರ್ಯಕರ್ತರು ಮುಖಂಡರನ್ನು ಅವರು ಎಂದಿಗೂ ಮರೆಯದೇ ಪ್ರೀತಿ ವಿಶ್ವಾಸದಿಂದ ಕಂಡವರು. ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ವೈದ್ಯ ಅವರು ಈ ಕ್ಷೇತ್ರದ ಶಕ್ತಿ ಎಂದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಸತೀಶ ನಾಯ್ಕ ಸಿರ್ಸಿ ಅವರ ನೇತೃತ್ವದಲ್ಲಿ ಸಚಿವ ಮಂಕಾಳ ವೈದ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನಾಮಧಾರಿ ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ ನಾಯ್ಕ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಗೌಡ, ಕೃಷ್ಣ ಗೌಡ, ಗಣಪಯ್ಯ ಗೌಡ, ವನಿತಾ ನಾಯ್ಕ, ಪುಷ್ಪಾ ನಾಯ್ಕ, ಉಷಾ ನಾಯ್ಕ, ವಾಮನ ನಾಯ್ಕ, ಚಂದ್ರಹಾಸ ಕೊಚರೇಕರ್, ಮಂಜುನಾಥ ನಾಯ್ಕ, ಎಂ.ಎನ್.ಸುಬ್ರಹ್ಮಣ್ಯ, ಉಲ್ಲಾಸ ನಾಯ್ಕ, ಯೋಗೇಶ ರಾಯ್ಕರ್, ಹೊನ್ನಾವರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ಟ, ತಿಮ್ಮಪ್ಪ ಗೌಡ, ಐ.ವಿ.ನಾಯ್ಕ, ಇರ್ಷಾದ್ ಖಾನ್, ಕಾಂಗ್ರೆಸ್ ಪಕ್ಷದ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಮಧುರಾ ನಾಯ್ಕ ಪ್ರಾರ್ಥಿಸಿದರು. ಮಾದೇವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಈ ಹಿಂದೆಯೂ ಐದು ವರ್ಷ ಸಮರ್ಥವಾಗಿ ಆಡಳಿತ ನೀಡಿದೆ. ಹಲವು ಜನಪಯೋಗಿ ಕಾರ್ಯ ಮಾಡಿದೆ. ಜಿಲ್ಲೆಯಲ್ಲಿ ಈ ಹಿಂದಿನ ಅವಧಿಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದೆ. ಈ ಬಾರಿ ಜಿಲ್ಲೆಯ ಜನತೆಯ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ಒಂದೊಮ್ಮೆ ಸರ್ಕಾರದಿಂದ ಆಗದಿದ್ದರು ನನ್ನ ವೈಯಕ್ತಿಕ ಖರ್ಚಿನಿಂದ ನಿರ್ಮಿಸುತ್ತೇನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.