ಶಿರಸಿ: ಚಾರೋಡಿ ಮೇಸ್ತ ಸಮಾಜ ಅಭಿವೃದ್ಧಿ ಸಂಘದಿಂದ ಚಾರೋಡಿ ಸಮಾಜದ 21 ಮಕ್ಕಳಿಗೆ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು. ರಾಮನ ಬೈಲಿನಲ್ಲಿರುವ ವರದೇಶ್ವರ ದೇವಸ್ಥಾನ ಚಾರೋಡಿ ಸಮಾಜದವರಿಂದ ತುಂಬಿ ತುಳುಕಿತು. ಇಲ್ಲಿ ಚಾರೋಡಿ ಸಮಾಜದ ಹಿರಿಯರ ಮಾರ್ಗದರ್ಶನದಂತೆ 21 ವಟುಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು.
ಇಂದಿನ ದಿನಮಾನದಲ್ಲಿ ದುಬಾರಿ ವೆಚ್ಚದಲ್ಲಿ ನಡೆಯುವ ಮತ್ತು ಬಡಬಗ್ಗರು ಮಾಡದೇ ಇರುವಂತಹ ಬ್ರಹ್ಮೋಪದೇಶವನ್ನು ಚಾರೋಡಿ ಸಮಾಜದವರು ತಮ್ಮ ಸಮಾಜದ ಕುಟುಂಬದವರಿಗೆ ಯಾವುದೇ ರೀತಿಯ ಹೊರೆಯಾಗದ ರೀತಿಯಲ್ಲಿ ಏರ್ಪಡಿಸಿದ್ದು ವಿಶೇಷವಾಗಿತ್ತು. ಚಾರೋಡಿ ಸಮಾಜದ ಗೌರವಾಧ್ಯಕ್ಷ ಹರಿಶ್ಚಂದ್ರ ಪಿ.ಮೇಸ್ತ, ಅಧ್ಯಕ್ಷ ಬಾಲಚಂದ್ರ ಮೇಸ್ತ, ಉಪಾಧ್ಯಕ್ಷ ನಾರಾಯಣ ಆಚಾರಿ, ಕಾರ್ಯದರ್ಶಿ ಮಂಜುನಾಥ ಆಚಾರಿ ಸೇರಿದಂತೆ ಸಮಾಜದ ನೂರಾರು ಸಂಖ್ಯೆಯ ಜನತೆ ಈ ಕಾರ್ಯದಲ್ಲಿ ಪಾಲ್ಗೊಂಡು ಸಮಾಜದ ಕಾರ್ಯವನ್ನು ಯಶಸ್ವಿಗೊಳಿಸಿದರು.