ಯಲ್ಲಾಪುರ: ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಕೆಹೆಚ್‌ಪಿಟಿ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸಗೇರಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆ ಸುಧಾರಣೆ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ನರೇಗಾ ಕೂಲಿಕಾರರಿಗೆ ಗುರುವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ತಾಲ್ಲೂಕು ಪಂಚಾಯತ್‌ನ ನರೇಗಾ ಸಹಾಯಕ ನಿರ್ದೇಶಕರಾದ ಮಂಜುನಾಥ ಆಗೇರ ಅವರು ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ಕೆಲಸಕ್ಕಾಗಿ ಬರುವ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗುತ್ತಿದೆ. ಕೂಲಿಕಾರರಿಗೆ ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆಯೇ ಹೊರತು, ತಮ್ಮ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ಸಾಮಾಜಿಕ ಕಳಕಳಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ಬರುವ ಕೂಲಿಕಾರರಿಗೆ ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದರು.
ಕೆರೆ ಸುಧಾರಣೆ ಕಾಮಗಾರಿ ಸ್ಥಳದಲ್ಲಿನ ಒಟ್ಟು 51 ನರೇಗಾ ಕೂಲಿಕಾರರಿಗೆ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಬಿಪಿ, ಶುಗರ್, ಹೆಚ್‌ಬಿ, ಟಿಬಿ ಸ್ಕ್ರೀನಿಂಗ್ ಸೇರಿದಂತೆ ಇನ್ನಿತರೇ ಆರೋಗ್ಯ ತಪಾಸಣೆ ಮಾಡುವ ಮೂಲಕ ಅಗತ್ಯವಿರುವವರಿಗೆ ಮಾತ್ರೆಗಳನ್ನು ವಿತರಿಸಿದರು. ಕೆಲವರಿಗೆ ಹೆಚ್ಚಿನ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅಣ್ಣಪ್ಪ ವಡ್ಡರ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಹೆಚ್‌ಒ ಡಾ. ಶೃತಿ ಅಂಗಡಿ, ವೈದ್ಯಾಧಿಕಾರಿಗಳಾದ ಜೋಸೆಫ್ ಫರ್ನಾಂಡೀಸ್, ಇರ್ಫಾನ್ ಖಾಝಿ, ಕವಿತಾ ಪೂಜಾರಿ,ಆಶಾ ಕಾರ್ಯಕರ್ತೆ ಸೀಮಾ ನಾಯ್ಕ, ಬಿಎಫ್‌ಟಿ ವಿಠ್ಠು ಮಲಗುಂಡಿ, ಮೇಟ್ ಅಕ್ಷತಾ ಮರಾಠಿ ಸೇರಿದಂತೆ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.