ಯಲ್ಲಾಪುರ: ರಾಜ್ಯದಲ್ಲೇ ಉತ್ತರಕನ್ನಡ ಜಿಲ್ಲಾ ಸಹಕಾರಿ ಸಂಸ್ಥೆಗಳು ಮಾದರಿಯಾಗಿದೆ. ಸಹಕಾರಿ ಸಂಸ್ಥೆಗಳು ಮಾತ್ರ ರೈತರ, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡುವ ಮನೋಭಾವ ಉಳಿಸಿಕೊಂಡು ಬಂದಿದೆ. ಗ್ರಾಮೀಣ ಭಾಗದ ಜನರು ಬ್ಯಾಂಕುಗಳಿಗೂ ಹೋಗದೇ ಸಹಕಾರಿ ಸಂಸ್ಥೆಯಲ್ಲೇ ವ್ಯವಹರಿಸುವ ಸ್ಥಿತಿಯನ್ನು ಕಾಣಬಹುದು ಎಂದು ಸಹಕಾರಿ ರತ್ನ ಪುರಸ್ಕೃತರು, ಟಿ.ಎಂ.ಎಸ್ ಮಾಜಿ ಅಧ್ಯಕ್ಷ ಆದ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.
ಅವರು ಗುರುವಾರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಯಲ್ಲಾಪುರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೋಸೈಟಿಯ ಬೆಳ್ಳಿ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಖಾಸಗಿಯವರಿಂದ ಹಣ ಪಡೆದು ಜನರು ಕಷ್ಟಕ್ಕೆ ಸಿಲುಕುತ್ತಿದ್ದರು. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳು ಮತ್ತು ಪಟ್ಟಣದ ಸಹಕಾರಿ ಕ್ರೆಡಿಟ್ ಸಂಸ್ಥೆಗಳಿoದ ಜನಸಾಮಾನ್ಯರ ಕಷ್ಟ ಪರಿಹಾರವಾಗುತ್ತಿದೆ. ಸಹಕಾರಿ ಸಂಘದ ಚಿಂತನೆ ಅಷ್ಟು ಅಗಾಧವಾದುದು. ಈ ಕುರಿತು ಜನರು ಕೂಡ ಅಷ್ಟೇ ವಿಶ್ವಾಸ ಉಳಿಸಿಕೊಂಡು ಬಂದಿದ್ದಾರೆ. ಆ ನಿಟ್ಟಿನಲ್ಲಿ ಈ ಸಂಸ್ಥೆ ಕಳೆದ 25 ವರ್ಷಗಳಿಂದಲೂ `ಅ’ ವರ್ಗದಲ್ಲಿ ಮುನ್ನಡೆದಿರುವುದು ಸಂಸ್ಥೆಯ ಹಿರಿಮೆ. ಇದಕ್ಕೆ ಉತ್ತಮ ಆಡಳಿತ ಮಂಡಳಿ ಅಷ್ಟೇ ಉತ್ತಮ ಸಿಬ್ಬಂದಿಗಳ ಕಾರ್ಯ ನಿರ್ವಹಣೆ ಕಾರಣ ಎಂದರು.
ರಾಜ್ಯ ಮಟ್ಟದ ಶ್ರೇಷ್ಠ ಸೌಹಾರ್ದ ಸಹಕಾರಿ ಪ್ರಶಸ್ತಿ ಪುರಸ್ಕೃತ ಜಿ.ಎನ್.ಹೆಗಡೆ ಹಿರೇಸರ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ 3 ವಿಭಾಗ ಮಾಡಬಹುದು. ಪಟ್ಟಣ ಸಹಕಾರಿ, ಸೌಹಾರ್ದ ಸಹಕಾರಿ ಮತ್ತು ಸಹಕಾರಿ ಈ ಮೂರು ಸಂಸ್ಥೆಗಳ ಚಿಂತನೆ ಒಂದೇ. ನಡೆಯುವ ದಾರಿ ಮಾತ್ರ ಭಿನ್ನವಾಗಿದೆ. ಈ ದೃಷ್ಟಿಯಿಂದ ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆ ಪ್ರಸ್ತುತ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವುದು ಸಂತಸ ತಂದಿದೆ. ಇಂದು ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸಂಸ್ಥೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.
ಯು.ಕೆ.ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಜನಸಾಮಾನ್ಯರನ್ನು ಹತ್ತಿರವೂ ತೆಗೆದುಕೊಳ್ಳದ ಕಾಲಘಟ್ಟದಲ್ಲಿ ಇಂತಹ ಕ್ರೆಡಿಟ್ ಸಹಕಾರಿ ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಂದವು. ಸಣ್ಣಪುಟ್ಟ ಉದ್ಯೋಗ, ಬಡವರಿಗೆ ಸಹಾಯ ಹೀಗೆ ಸಮಾಜದ ಎಲ್ಲ ವರ್ಗವನ್ನು ಇಂತಹ ಸಂಸ್ಥೆಗಳು ತಲುಪುವುದರಿಂದ ಸಮಾಜದ ಸ್ವಾಸ್ತ್ಯ ಬೆಳವಣಿಗೆಗೆ ಕಾರಣವಾಗಿದೆ. ಈ ಸಂಸ್ಥೆಯನ್ನು 25 ವರ್ಷಗಳ ಹಿಂದೆ ದಿವಂಗತ ವಿನಾಯಕ ಕೊಡಕಣಿ ಸಮಾನ ಮನಸ್ಕರ ಜೊತೆ ಸೇರಿ ಕಟ್ಟಿದ್ದರು. ಅವರ ಹೆಸರು ಶಾಶ್ವತ ಇರುವಂತಾಗಿದೆ. ಈ ಸಂಸ್ಥೆ ಮುಂದೆ ಇನ್ನು ಹೆಚ್ಚಿನ ಪ್ರವರ್ಧಮಾನಕ್ಕೆ ಬರುವಂತಾಗಲಿ ಎಂದರು.
ಶಿರಸಿಯ ಸ್ಕೋಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಸರಸ್ವತಿ ಎನ್.ರವಿ ಮಾತನಾಡಿ, 118 ವರ್ಷಗಳ ಇತಿಹಾಸವನ್ನು ಸಹಕಾರಿ ಸಂಸ್ಥೆಗಳು ಹೊಂದಿದೆ. ನಮ್ಮ ಜಿಲ್ಲೆ ರಾಜ್ಯದಲ್ಲೇ ಸಹಕಾರಿ ಕ್ಷೇತ್ರಕ್ಕೆ ಗಟ್ಟಿ ನೆಲವಾಗಿದೆ. ಜಗತ್ತಿನ ಅನೇಕ ಬ್ಯಾಂಕುಗಳು ಆರ್ಥಿಕ ಸಂಕಷ್ಟದಲ್ಲಿ ಬುಡಮೇಲಾದರೂ ನಮ್ಮ ಸಹಕಾರಿ ಸಂಸ್ಥೆಗಳು ಗಟ್ಟಿಯಾಗಿಯೇ ಉಳಿದಿದೆ. ಇದು ಈ ನೆಲದ ಶ್ರೇಷ್ಠಗುಣ ಎಂದರು.
ಸ0ಸ್ಥೆಯ ಅಧ್ಯಕ್ಷ ಪರಶುರಾಮ ಆಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈ.ಟಿ.ಎಸ್.ಎಸ್. ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ, ಗ್ರಾಮದೇವಿ ದೇವಸ್ಥಾನದ ಧರ್ಮದರ್ಶಿ ರಾಜೇಂದ್ರಪ್ರಸಾದ ಭಟ್ಟ, ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಭಟ್ಟ ಸಾಂದರ್ಭಿಕವಾಗಿ ಮಾತನಾಡಿದರು.
ಸಂಸ್ಥೆಯನ್ನು ಬೆಳೆಸುವಲ್ಲಿ ಕಾರಣರಾದ ಹಿರಿಯ 15 ಸದಸ್ಯರನ್ನು ಈ ಸಂದರ್ಭದಲ್ಲಿ ಮತ್ತು ವಿವಿಧ 7 ಶಾಖೆಗಳ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಬೆಳ್ಳಿಹಬ್ಬದ ನಿಮಿತ್ತ ಬೆಳಿಗ್ಗೆ ನವಚಂಡಿ ಹವನ, ಧಾರ್ಮಿಕ ಉಪನ್ಯಾಸ ಮೊದಲಾದ ಕಾರ್ಯಕ್ರಮಗಳು ನಡೆದವು. ಅಧಿತಿ ಭಟ್ಟ ಪ್ರಾರ್ಥನೆ, ನಾಗರಾಜ ಹೆಗಡೆ ಹೋನ್ನಾವರ ನಿರ್ವಹಿಸಿದರು. ನಿರ್ದೇಶಕರಾದ ನರಸಿಂಹ ಸಭಾಹಿತ ಸ್ವಾಗತಿಸಿದರು. ಸುಧೀರ ಕೊಡ್ಕಣಿ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ನಾಯಕ ವಂದಿಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರಾದ ಮಹಮ್ಮದ್ ಅಲಿ ಖತೀಪ್, ಸುಹಾಸ್ ಅಸುಕರ್, ಅನಿಲಕುಮಾರ ಶೆಟ್ಟಿ, ಜೈವಂತಿ ಮೋತಿಲಾಲ್ ಕಲಬುರ್ಗಿ, ಪಿ.ಜಿ.ಭಟ್ಟ ಬರಗದ್ದೆ, ನಾರಾಯಣ ವಿ. ಶಾನಭಾಗ, ಸುರೇಶ ಮುರ್ಕುಂಬಿ, ಮತ್ತು ಕಾನೂನು ಸಲಹೆಗಾರರಾದ ಕೆ.ಎನ್.ಹೆಗಡೆ ಹೋಸತೋಟ ಮತ್ತು ಮಹೇಶ ನಾಯ್ಕ, ವಿ.ಪಿ.ಭಟ್ಟ ಕಣ್ಣೀಮನೆ, ಪಿರ್ಸಾಬ್ ಶೇಖ್ ಇಮಾಮ್, ರಾಜೇಂದ್ರ ಶೇಟ್ ಇವರನ್ನು ಸನ್ಮಾನಿಸಲಾಯಿತು.