ನವದೆಹಲಿ: ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪೀಕರ್ ಸ್ಥಾನದ ಬಳಿ ಐತಿಹಾಸಿಕ ಚಿನ್ನದ ರಾಜದಂಡವನ್ನು ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಲಾಯಿತು ಎಂದು ಶಾ ಹೇಳಿದರು.
ಈ ರಾಜದಂಡವನ್ನು “ಸೆಂಗೊಲ್” ಎಂದು ಕರೆಯಲಾಗುತ್ತದೆ – ಇದು ತಮಿಳು ಪದ “ಸೆಮ್ಮೈ” ನಿಂದ ಬಂದಿದೆ, ಅಂದರೆ “ಸದಾಚಾರ” ಎಂಬರ್ಥ ಹೊಂದಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಐತಿಹಾಸಿಕ ರಾಜದಂಡವಾದ ‘ಸೆಂಗೊಲ್’ ಅನ್ನು ಅಲಹಾಬಾದ್‌ನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಯಿತು. 1947ರ ಆಗಸ್ಟ್ 14ರಂದು ನೆಹರೂ ಅವರು ಅನುಭವಿಸಿದ ಅದೇ ಭಾವನೆಯನ್ನು ಈ ಸೆಂಗೋಲ್ ಪ್ರತಿನಿಧಿಸುತ್ತದೆ.
ಅಧಿಕಾರದ ಹಸ್ತಾಂತರ ಎಂದರೆ ಕೇವಲ ಕೈ ಕುಲುಕುವುದು ಅಥವಾ ದಾಖಲೆಗಳಿಗೆ ಸಹಿ ಮಾಡುವುದು ಮಾತ್ರ ಆಗಿರಬಾರದು, ಆಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಪ್ರದಾಯಗಳೊಂದಿಗೆ ಸಂಪರ್ಕ ಹೊಂದಿರಬೇಕು. ಮೇ. 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಇದು ಪ್ರಧಾನಿಯವರ ದೂರದೃಷ್ಟಿಗೆ ಅನುಗುಣವಾಗಿದೆ ಎಂದು ಅವರು ಹೇಳಿದ್ದಾರೆ.