ಅಂಕೋಲಾ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೃಷ್ಣಾಪುರದಲ್ಲಿ ವಯೋನಿವೃತ್ತಿ ಹೊಂದಿದ ವಿಜಯ ನಾಯಕರವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯ ನಾಯಕ, ಸಂಘ ನೀಡಿದ ಗೌರವ ಸ್ಮರಣೀಯವಾದುದು. ಇಲಾಖೆ ಹಾಗೂ ಶಿಕ್ಷಕ ವೃಂದ, ಕುಟುಂಬಸ್ಥರು ನೀಡಿದ ಸಹಕಾರದಿಂದ ಶಿಕ್ಷಕನಾಗಿ, ತಾಲೂಕು ಜಿಲ್ಲಾ ಘಟಕದ ಅಧ್ಯಕ್ಷನಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಲು ಅವಕಾಶವಾಗಿದ್ದು, ಅವರೆಲ್ಲರನ್ನು ಮನದುಂಬಿ ಸ್ಮರಿಸುತ್ತೇನೆ ಎಂದರು.
ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಅಂಕೋಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಯೋ ನಿವೃತ್ತಿ ಹೊಂದಲಿರುವ ಶಿಕ್ಷಕರನ್ನು ಅವರ ನಿವೃತ್ತಿ ದಿನದಂದೇ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡುತ್ತಿರುವುದು ಶ್ಲಾಘನೀಯವಾದದು. ವಿಜಯ ನಾಯಕರು ಉತ್ತಮ ಶಿಕ್ಷಕರಾಗಿ ಇಲಾಖೆಗೆ ಒಳ್ಳೆ ಹೆಸರು ತಂದುಕೊಡುವಲ್ಲಿ ಸಹಕರಿಸಿದ್ದಾರೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಮಾತನಾಡಿ, ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ ವಿಜಯ ನಾಯಕರು ಶಿಕ್ಷಕರಷ್ಟೇ ಅಲ್ಲದೇ ಅನುಭವಿ ಆಡಳಿತಗಾರರು, ತಾಲೂಕು ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯ ಶಿಕ್ಷಕರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ಎಂ.ನಾಯಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಶೇಖರ ಗಾಂವಕರ ಲಕ್ಷ್ಮಿ ನಾಯಕ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ವಿ.ನಾಯಕ ವಂದಿಸಿದರು. ರಾಜೇಶ ಮಾಸ್ತರ ಸೂರ್ವೆ ನಿರ್ವಹಿಸಿದರು. ಶೋಭಾ ಎಂ.ನಾಯಕ, ವಿಭಾ, ಶ್ರೀಗಣೇಶ, ಡಾ.ಶುಭಾ ಹಾಗೂ ಕುಟುಂಬಸ್ಥರು ಸಹಕರಿಸಿದರು. ಸಂಘದ ಪದಾಧಿಕಾರಿಗಳಾದ ಸವಿತಾ ಗಾಂವಕರ, ತುಕಾರಾಮ ಬಂಟ, ದಿವಾಕರ ದೇವನ ಮನೆ, ಆನಂದು ವಿ.ನಾಯಕ, ಶೋಭಾ ಎಸ್.ನಾಯಕ, ವಿನಾಯಕ ಪಿ.ನಾಯಕ ಸೇರಿದಂತೆ ವಿಜಯ ನಾಯಕರ ಸ್ನೇಹವಲಯದವರು ಉಪಸ್ಥಿತರಿದ್ದರು.