ಕಾರವಾರ: ಇಲ್ಲಿನ ಸದಾಶಿವಗಡದ ರಿದಂ ಹಾರ್ಟ್ಬೀಟ್ ನೃತ್ಯಶಾಲೆಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಇತ್ತೀಚಿಗೆ ನಗರದ ಮಹಿಳಾ ಮಂಡಳದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನೌಕಾನೆಲೆ ಮಕ್ಕಳ ಶಾಲೆಯ ಮುಖ್ಯಾಧ್ಯಾಪಕಿ ವಂದನಾ ಕಾಂಡೇಕರ ಅವರು ಉದ್ಘಾಟಿಸಿ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ನೃತ್ಯ, ಸಂಗೀತ, ನಟನೆ, ಕರಾಟೆ, ಚಿತ್ರಕಲೆ, ಮಾತಿನ ಕಲೆ, ಯೋಗ ಮುಂತಾದವುಗಳಲ್ಲಿ ಆಸಕ್ತಿ ಕಡಿಮೆ ಮಾಡಿಕೊಂಡ ಸಂದರ್ಭದಲ್ಲಿ ಬೇಸಿಗೆ ಶಿಬಿರದ ಮಾಧ್ಯಮದಿಂದ ಅದರ ಪರಿಚಯ ಹಾಗೂ ತರಬೇತಿ ನೀಡುತ್ತಿರುವ ಸಂಸ್ಥೆಯ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸದಾಶಿವಗಡ ಶಿವಾಜಿ ಕಾಲೇಜಿನ ಶ್ರೀದೇವಿ ಬಿ.ನಾಯ್ಕ, ಶಿರವಾಡದ ಜಿ.ಎನ್.ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮುಖ್ಯಾಧ್ಯಾಪಕಿ ನಿಯತಿ ಕೋಮಾರಪಂಥ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಹೈಸ್ಕೂಲ್ ಹಿರಿಯ ಶಿಕ್ಷಕಿ ಭವಾನಿ ಹೆಗಡೆ ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು. ವೇದಿಕೆ ಮೇಲೆ ಸಂಸ್ಥೆಯ ಸದಸ್ಯರಾದ ಸುನಂದಾ ಪ್ರಸಾದ, ಉದಯ ನಾಯ್ಕ,
ಶಿಕ್ಷಕ ಕಿರಣ ನಾಯ್ಕ, ಸುನಿಲ ಐಗಳ ಉಪಸ್ಥಿತರಿದ್ದರು.
ಹಿರಿಯ ಕಲಾವಿದರಾದ ಡಾ.ವಸಂತ ಬಾಂದೇಕರ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಸಂಸ್ಥೆಯ ಮಾಲಕಿ ಹಾಗೂ ನೃತ್ಯ ಸಂಯೋಜಕಿ ಪೂನಂ ಪ್ರಸಾದ ವಂದಿಸಿದರು. ಕಾರ್ಯಕ್ರಮದ ಶಿಬಿರದಲ್ಲಿ ಭಾಗವಹಿಸಿದ ಹಾಗೂ ವಿಜೇತರಾದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಪದಕ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಕೊನೆಗೆ ಮಕ್ಕಳಿಂದ ಶಿಬಿರದಲ್ಲಿ ತರಬೇತಿ ಪಡೆದ ವಿವಿಧ ಕಲೆಗಳು ಪ್ರದರ್ಶನಗೊಂಡವು.