ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಅನುಮತಿಸುತ್ತದೆ. ಆದರೆ, ಬೇಕಾಬಿಟ್ಟಿಯಾಗಿ ಮಾಡಿದ ಟ್ವೀಟ್‌ಗಳೆಲ್ಲವೂ ಮುಕ್ತವಾಗಿ ಬಳಕೆದಾರರನ್ನು ಇನ್ನುಮುಂದೆ ತಲುಪಲು ಅವಕಾಶವಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಟ್ವೀಟ್‌ಗಳು ಟ್ವಿಟರ್ ತಾಣದಲ್ಲಿ ಗೋಚರಿಸದಂತೆ ನಿರ್ಬಂಧಿಸಲಾಗುತ್ತದೆ ಎಂದು ಕಂಪನಿಯು ತನ್ನ ಪರಿಷ್ಕೃತ ನೀತಿಯಲ್ಲಿ ಹೇಳಿದೆ.
ಆರಂಭದಲ್ಲಿ ದ್ವೇಷಪೂರಿತ ನಡವಳಿಕೆಯಂಥ ನಿಯಮಗಳ ಉಲ್ಲಂಘನೆಯ ಟ್ವೀಟ್‌ಗಳಿಗೆ ವಿಜಿಬಿಲಿಟಿ ಫಿಲ್ಟರ್ (ಗೋಚರ ಸೋಸುಕ) ಅಳವಡಿಸಿ, ನಂತರ ಅದನ್ನು ಇತರ ಡೊಮೇನ್‌ಗಳಿಗೂ ವಿಸ್ತರಿಸಲಿದೆ. ಟ್ವಿಟರ್ ಬಳಕೆದಾರರಿಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಸೆನ್ಸಾರ್‌ಶಿಪ್ ಭಯವಿಲ್ಲದೆ ವ್ಯಕ್ತಪಡಿಸುವ ಹಕ್ಕಿದೆ ಎಂದು ಸಂಸ್ಥೆ ತಿಳಿಸಿದೆ.
‘ನಿಯಮಗಳನ್ನು ಉಲ್ಲಂಘಿಸುವ ವಿಷಯದಿಂದ ಬಳಕೆದಾರರನ್ನು ನಮ್ಮ ಜಾಲತಾಣದಲ್ಲಿ ಸುರಕ್ಷಿತವಾಗಿರಿಸುವುದು ನಮ್ಮ ಜವಾಬ್ದಾರಿ ಮತ್ತು ನಂಬಿಕೆ. ಈ ನಂಬಿಕೆಗಳು ವಾಕ್ ಸ್ವಾತಂತ್ರ‍್ಯದ ಅಡಿಪಾಯವಾಗಿದೆ. ಹಾಗಂಥ, ನಿಯಮ ಉಲ್ಲಂಘಿಸಿದ ಟ್ವೀಟ್‌ಗಳಿಗೆ ಮುಕ್ತವಾಗಿ ಬಳಕೆದಾರರನ್ನು ತಲುಪುವ ಸ್ವಾತಂತ್ರ‍್ಯವಿದೆ ಎಂದಲ್ಲ. ನಮ್ಮ ನೀತಿಗಳನ್ನು ಉಲ್ಲಂಘಿಸುವ ಟ್ವೀಟ್‌ಗಳು ಗೋಚರಿಸದಂತೆ, ಅವು ತಲುಪುವ ವ್ಯಾಪ್ತಿಯನ್ನು ನಿರ್ಬಂಧಿಸುವುದು ನಮ್ಮ ತತ್ವಾದರ್ಶವಾಗಿದೆ’ ಎಂದು ಸಂಸ್ಥೆ ಹೇಳಿದೆ.