ಅಂಕೋಲಾ: ಭೌಗೋಳಿಕ ಹೆಗ್ಗುರುತಿನ ಆಧಾರದ ಮೇಲೆ ನೀಡುವ ಜಿಐ ಟ್ಯಾಗ್ ಮಾನ್ಯತೆಯನ್ನು ವಿಶೇಷ ರುಚಿ ಹಾಗೂ ಗುಣ ಲಕ್ಷಣ ಹೊಂದಿರುವ ಅಂಕೋಲಾದ ಕರಿ ಇಶಾಡು ಮಾವಿನ ತಳಿಗೆ ನೀಡಲಾಗಿದೆ.
ಎಲ್ಲೆಡೆ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆಯಾದರೂ ತಾಲೂಕಿನಲ್ಲಿ ಬೆಳೆಯುವ ಕರಿ ಇಶಾಡು ವಿಶೇಷ ಗುಣ ಹಾಗೂ ಸ್ವಾದಿಷ್ಟ ಭರಿತವಾದ ರುಚಿ ಹೊಂದಿದೆ. ಈಗಾಗಲೇ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದ ಈ ಮಾವು, ಋತುಮಾನದಲ್ಲಿ ತಾಲೂಕಿನಿಂದ ಹೊರ ದೇಶಗಳಿಗೂ ರಫ್ತಾಗುತ್ತದೆ. ತಾಲೂಕಿನಲ್ಲಿ 49, ಕಾರವಾರದ 3 ಹಾಗೂ ಕುಮಟಾದ 12 ಹಳ್ಳಿಗಳಲ್ಲಿ ಈ ಕರಿ ಇಶಾಡು ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.
ಮಾರ್ಚ್ ಅಂತ್ಯಕ್ಕೆ ಮಾನ್ಯತೆ: ತಾಲೂಕಿನ ಮಾತಾ ತೋಟಗಾರ್ಸ್ ಫಾರ್ಮರ್ ಪ್ರೊಡ್ಯುಸರ್ ಕಂಪನಿಯ ಹೆಸರಿನಲ್ಲಿ ಅಂಕೋಲಾ ಕರಿ ಇಶಾಡು ಮಾವಿಗೆ 2022ರಲ್ಲಿ ಜಿಐ ಮಾನ್ಯತೆ ನೀಡಲು ಅರ್ಜಿಯನ್ನು ಸಲ್ಲಿಸಲಾಗಿತ್ತು. ನಬಾರ್ಡ್ ಅಧಿಕಾರಿ ರೇಶಿಸ್ರವರು ಈ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಸಹಕಾರ ನೀಡಿದ್ದರು. ತೋಟಗಾರಿಕೆ ಇಲಾಖೆ ನೆರವಿನಿಂದ ಜಿಐ ಟ್ಯಾಗ್ ಕುರಿತು ಅರ್ಜಿ ಸಲ್ಲಿಸಿ ಚೆನೈನಲ್ಲಿ ಮಾವಿನ ಹಣ್ಣಿನ ಕುರಿತು ಮತ್ತು ಅದರ ಉತ್ಪನ್ನಗಳ ಕುರಿತು ಪ್ರಾತಕ್ಷತೆ ನೀಡಲಾಗಿತ್ತು. ಇದೀಗ ಹಣ್ಣಿನ ಮಾರುಕಟ್ಟೆ ಆಧರಿಸಿ ಹಣ್ಣಿನ ವಿವಿಧ ಬಗೆಯ ಉತ್ಪನ್ನಗಳನ್ನು ಕ್ರೋಢೀಕರಿಸಿ ಇಲಾಖೆ ಸಂಪೂರ್ಣವಾಗಿ ವರದಿಯನ್ನು ಪಡೆದುಕೊಂಡು ಜಿಐ ಮಾನ್ಯತೆ ನೀಡಿದೆ. ಈ ಮಾನ್ಯತೆ 2032ರವರೆಗೆ ಇರಲಿದೆ.
ಕರಿ ಇಶಾಡು ಮಾವಿನ ಹಣ್ಣಿಗೆ ಜಿಐ ಮಾನ್ಯತೆ ದೊರೆತಿರುವುದು ಸಾಮಾನ್ಯವದುದಲ್ಲ. ಈ ಮಾನ್ಯತೆ ಪ್ರಧಾನಿ ಕಚೇರಿಯಿಂದ ವಿವಿಧ ರಾಷ್ಟ್ರಗಳಿಗೆ ತಲುಪಲಿದೆ. ಆ ಮೂಲಕ ನಮ್ಮ ಕರಿ ಇಶಾಡು ಮಾವಿನ ಹಣ್ಣು ವಿಶ್ವದಲ್ಲೇ ಇನ್ನಷ್ಟು ಪ್ರಸಿದ್ಧಿ ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ ಅಂಕೋಲಾ ಕರಿ ಇಶಾಡು ಮಾವಿನ ಹಣ್ಣಿಗೆ ಇದೀಗ ಜಿ.ಐ ಟ್ಯಾಗ್ ಮಾನ್ಯತೆ ಸಿಕ್ಕಿದ್ದು ಅಂಕೋಲಾ ಮಾವು ಬೆಳೆಗಾರರ ಮತ್ತು ನಾಗಿಕರ ಪಾಲಿಗೆ ಸಂತೋಷದ ಸಂಗತಿಯಾಗಿದೆ.
ಏನಿದು ಜಿಐ ಟ್ಯಾಗ್?
ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಪ್ರಕಾರ, ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ಅಥವಾ ಪ್ರಾದೇಶಿಕ ಸೂಚನಾ ಟ್ಯಾಗ್ ಒಂದು ಬೌದ್ಧಿಕ ಆಸ್ತಿಯ ಮಾದರಿಯಾಗಿದೆ. ಇದು ಒಂದು ಪ್ರದೇಶಕ್ಕೆ ವಿಶಿಷ್ಟವಾಗಿರುವ ವಸ್ತು, ಉತ್ಪನ್ನಗಳಿಗೆ ನೀಡಲಾಗುವ ಪ್ರಮಾಣ ಪತ್ರ, ಹೆಸರು ಅಥವಾ ಸಂಕೇತವಾಗಿದೆ. ಈ ಜಿಐ ಟ್ಯಾಗ್ ವಸ್ತು ಅಥವಾ ಉತ್ಪನ್ನಗಳ ಗುಣಮಟ್ಟ ಹಾಗೂ ಅಗತ್ಯ ಗುಣಲಕ್ಷಣಗಳನ್ನು ಸೂಚಿಸುತ್ತದೆ.
ಭಾರತದಲ್ಲಿ ಪ್ರಸಕ್ತ 400ಕ್ಕೂ ಹೆಚ್ಚಿನ ಜಿಐ ಟ್ಯಾಗ್ಗಳಿದ್ದು, ಅಧಿಕೃತ ಬಳಕೆದಾರರಾಗಿ ನೋಂದಾಯಿಸಿರುವವರನ್ನು ಹೊರತುಪಡಿಸಿ, ಇತರರು ಅಂತಹ ಪ್ರಸಿದ್ಧ ಉತ್ಪನ್ನಗಳ ಹೆಸರನ್ನು ಬಳಸುವುದನ್ನು ನಿರ್ಬಂಧಿಸುತ್ತದೆ. ಕರ್ನಾಟಕದಲ್ಲಿ ಈ ರೀತಿಯ ಮಾನ್ಯತೆ ಪಡೆದಿರುವ 40ಕ್ಕೂ ಹೆಚ್ಚು ಉತ್ಪನ್ನಗಳಿವೆ.