ಶಿರಸಿ: ತಾಲೂಕಾ ಆರ್ಯ, ಈಡಿಗ, ಬಿಲ್ಲವ ಹಾಗೂ ನಾಮಧಾರಿ ಯುವಕ ಸಂಘದಿಂದ ನಡೆದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ದುರ್ಗಾಂಬಾ ತಂಡ ಪ್ರಥಮ ಬಹುಮಾನ ಪಡೆಯುವ ಮೂಲಕ ಗೆಲುವಿನ ನಗೆ ಬೀರಿತು.
ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ದವು. ಅಂತಿಮ ಸುತ್ತಿನಲ್ಲಿ ನಾಗರಾಜ ಕಲಗಾರ ಮತ್ತು ದತ್ತು ರಾವ್ ಮಾಲೀಕತ್ವದ ದುರ್ಗಾಂಬಾ ತಂಡ ಹಾಗೂ ದೀಪಕ್ ಮದನ್ ರಾಘು ಬೆಳಲೆ ಮಾಲಿಕತ್ವದ ಧೀಮ್ ಚಾಲೆಂಜರ್ಸ್ ತಂಡಗಳ ನೇರ ಹಣಾಹಣಿಯಲ್ಲಿ ಮೋದಲು ಬ್ಯಾಟ್ ಮಾಡಿದ ದುರ್ಗಾಂಬಾ ತಂಡ 52 ರನ್ ಗಳ ಗುರಿ ನೀಡಿತು, ಅದಕ್ಕೆ ಉತ್ತರವಾಗಿ ಧೀಮಾ ತಂಡ 38 ರನ್ಗಳಿಗಷ್ಟೆ ಶಕ್ತವಾಗಿ ಸೋಲು ಅನುಭವಿಸಿತು. ಇದರಿಂದ ದುರ್ಗಾಂಬಾ ತಂಡ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.
ರನ್ನರ್ ಅಪ್ ಆಗಿ ಧೀಮಾ ತಂಡ ತೃಪ್ತಿ ಪಡೆದುಕೊಂಡಿತು. ಇನ್ನು ತೃತೀಯ ಸ್ಥಾನವನ್ನು ಮಾರಿಕಾಂಬಾ ನಾಮಧಾರಿ ತಂಡ ಪಡೆದುಕೊಂಡಿತು.ಪ್ರಥಮ ಬಹುಮಾನವಾಗಿ 1 ಲಕ್ಷ ದ್ವಿತೀಯ 50 ಸಾವಿರ, ತೃತೀಯ 20 ಸಾವಿರ ರೂಪಾಯಿ ಹಾಗೂ ಆಕರ್ಷಕ ಪಾರಿತೋಷಕವನ್ನು ಗೆದ್ದ ತಂಡಗಳಿಗೆ ನೀಡಿ ಅಭಿನಂದಿಸಲಾಯಿತು. ಉತ್ತಮ ಬ್ಯಾಟ್ಸ್ಮನ್ ಆಗಿ ತಿರುಮಲ ಭಟ್ಕಳ, ಉತ್ತಮ ಬೌಲರ್ ಆಗಿ ವಿನಾಯಕ ಹಾಗೂ ಆಲ್ ರೌಂಡರ್ ಆಗಿ ಶಶಿ ಹಳದಿಪುರ ಅವರನ್ನ ಆಯ್ಕೆ ಮಾಡಿ ಪಾರಿತೋಷಕ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಉದಯ ನಾಯ್ಕ, ರಾಮಣ್ಣ, ನಾಗರಾಜ ನಾಯ್ಕ, ಮಧುಕರ ಬಿಲ್ಲವ, ಮಂಜುನಾಥ ಎಕ್ಕಂಬಿ, ರವಿ ಪೂಜಾರಿ, ರಾಘವೇಂದ್ರ ನಾಯ್ಕ ಬೆಳಲೆ, ವಿನಾಯಕ ನಾಯ್ಕ ಇದ್ದರು.